ಯುದ್ಧಪೀಡಿತ ಉಕ್ರೇನ್ನ ಪ್ರಸ್ತುತ ಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಮೋದಿ ಶೀಘ್ರದಲ್ಲಿ ಮತ್ತೊಂದು ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ. ಈ ಮೂಲಕ ಇದೇ ವಿಚಾರವಾಗಿ ಕಳೆದ 24 ಗಂಟೆಗಳಲ್ಲಿ ಪ್ರಧಾನಿ ಮೋದಿ ಕರೆದ ಮೂರನೇ ಉನ್ನತ ಮಟ್ಟದ ಸಭೆ ಇದಾಗಿರಲಿದೆ. ಈ ಸಭೆಯಲ್ಲಿ ಉನ್ನತ ಮಟ್ಟದ ಸಚಿವರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ರಷ್ಯಾದ ದಾಳಿಯಿಂದ ಕಂಗಾಲಾಗಿರುವ ಉಕ್ರೇನ್ ಸರ್ಕಾರ ಮನವಿಯ ಬಳಿಕ ಯುದ್ಧ ಪೀಡಿತ ರಾಷ್ಟ್ರಕ್ಕೆ ವೈದ್ಯಕೀಯ ವ್ಯವಸ್ಥೆಯ ಸರಬರಾಜು ಸೇರಿದಂತೆ ವಿವಿಧ ಮಾನವೀಯ ನೆರವುಗಳನ್ನು ನೀಡಲು ಭಾರತವು ಒಪ್ಪಿಕೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ನಿನ್ನೆ ಸಂಜೆ ಉಕ್ರೇನ್ನಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಸಭೆಯಲ್ಲಿ ಕೋಲಾಹಲವೇ ಆರಂಭವಾಗಿತ್ತು. ಅದರ ಜೊತೆಯಲ್ಲಿ ಆತಂಕದಲ್ಲಿರುವ ಅವರ ಕುಟುಂಬಗಳು ಹಾಗೂ ಸ್ನೇಹಿತರು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ಗಳನ್ನು ಶೇರ್ ಮಾಡುವ ಮೂಲಕ ಸರ್ಕಾರವು ಶೀಘ್ರದಲ್ಲಿಯೇ ಅವರನ್ನು ತಾಯ್ನಾಡಿಗೆ ಕರೆಯಿಸಿಕೊಳ್ಳಬೇಕು ಎಂದು ಒತ್ತಡ ಹೇರಿದರು.
ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಲು ಈ ಹಿಂದೆ ಉನ್ನತ ಮಟ್ಟದ ಸಭೆ ಕರೆದಿದ್ದ ಪ್ರಧಾನಿ ಮೋದಿ ನಾಲ್ವರು ಕೇಂದ್ರ ಸಚಿವರು ಉಕ್ರೇನ್ನ ಗಡಿ ರಾಷ್ಟ್ರಗಳಿಗೆ ತೆರಳಿ ಅಲ್ಲಿಂದ ಉಕ್ರೇನ್ನಲ್ಲಿ ಸಿಲುಕಿರುವವರ ಜೊತೆ ಸಂಪರ್ಕ ಸಾಧಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿಕೆ ಸಿಂಗ್ ವಿಶೇಷ ಭಾರತೀಯ ರಾಯಭಾರಿಗಳಾಗಿ ಉಕ್ರೇನ್ ಸುತ್ತಮುತ್ತಲಿನ ದೇಶಗಳಿಗೆ ತೆರಳಿ ಯುದ್ಧ ಪೀಡಿತ ಸ್ಥಳದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಾರೆ.