ನವದೆಹಲಿ : ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ದುರಂತದ (Odisha train accident) ತನಿಖೆಯನ್ನು ಕೇಂದ್ರ ತನಿಖಾ ದಳ (CBI) ವಹಿಸಿಕೊಂಡಿದೆ ಮತ್ತು ತನಿಖೆ ನಡೆಸಲು ಒಂದು ತಂಡ ಇಂದು ಅಪಘಾತದ ಸ್ಥಳಕ್ಕೆ ತಲುಪಿದೆ.
ರೈಲು ದುರಂತದ ಕುರಿತಂತೆ ಸಿಬಿಐ ಇಂದು ಎಫ್ಐಆರ್ (FIR) ದಾಖಲಿಸಿಕೊಂಡಿದ್ದು, ರೈಲು ದುರಂತಕ್ಕೆ ಕಾರಣವಾಗುವ ಉದ್ದೇಶಪೂರ್ವಕ ಪ್ರಯತ್ನಗಳು ಸೇರಿದಂತೆ ಎಲ್ಲಾ ಸಂಭವನೀಯ ಕಾರಣಗಳನ್ನು ಪರಿಶೀಲಿಸುತ್ತಿದೆ.
ಕೋರಮಂಡಲ್ ಎಕ್ಸ್ಪ್ರೆಸ್, ಯಶವಂತಪುರ-ಹೌರಾ ಎಕ್ಸ್ಪ್ರೆಸ್ ಮತ್ತು ಒಡಿಶಾ ರಾಜ್ಯದ ಬಹನಾಗ ಬಜಾರ್ನಲ್ಲಿ ಜೂನ್ 2 ರಂದು ಸಂಭವಿಸಿದ ಗೂಡ್ಸ್ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯ, ಒಡಿಶಾ ಸರ್ಕಾರದ ಒಪ್ಪಿಗೆ ಮತ್ತು ಡಿಒಪಿಟಿ (ಸಿಬ್ಬಂದಿ ಮತ್ತು ತರಬೇತಿ ಇಲಾಖೆ) ಯ ಆದೇಶದ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಈ ಅಪಘಾತಕ್ಕೆ ಸಂಬಂಧಿಸಿದಂತೆ ಬಾಲಸೋರ್ ಸರ್ಕಾರಿ ರೈಲ್ವೆ ಪೊಲೀಸ್ (GRP), ಕಟಕ್ (ಒಡಿಶಾ) ಪ್ರಕರಣ ಸಂಖ್ಯೆ 64 ರಲ್ಲಿ ಈ ಹಿಂದೆ ದಾಖಲಾದ ಪ್ರಕರಣದ ತನಿಖೆಯನ್ನು ಏಜೆನ್ಸಿ ವಹಿಸಿಕೊಂಡಿದೆ. ಸಿಬಿಐ ತಂಡವು ಬಾಲಸೋರ್ ತಲುಪಿದೆ ಎಂದು ಅವರು ಹೇಳಿದರು. ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ 275 ಮಂದಿ ಸಾವನ್ನಪ್ಪಿದ್ದು, 1000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.