ಕೇಂದ್ರ ಚುನಾವಣಾ ಆಯೋಗ ಇಂದು ಒಂದು ಲೋಕಸಭೆ ಹಾಗೂ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಘೋಷಿಸಿದೆ.
ಈ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನದಿಂದ ತೆರವಾದ ಉತ್ತರ ಪ್ರದೇಶದ ಮೈನ್ಪುರಿ ಲೋಕಸಭಾ ಕ್ಷೇತ್ರ, ಸದಸ್ಯತ್ವದಿಂದ ಅನರ್ಹಗೊಂಡ ಸಮಾಜವಾದಿ ಪಕ್ಷದ ಮಹಮ್ಮದ್ ಆಜಂ ಖಾನ್ ಪ್ರತಿನಿಧಿಸುತ್ತಿದ್ದ ರಾಂಪುರ್ ವಿಧಾನಸಭಾ ಕ್ಷೇತ್ರ ಸೇರಿದಂತೆ ಇತರೆ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಮಹತ್ವದ ಸಂಗತಿ ಎಂದರೆ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಗಳಿಗೆ ಮತ ಎಣಿಕೆ ನಡೆಯಲಿರುವ ದಿನದಂದೇ ಈ ಉಪಚುನಾವಣೆ ಕ್ಷೇತ್ರಗಳ ಮತ ಎಣಿಕೆಯೂ ನಡೆಯಲಿದೆ.