ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ಇನ್ನೂ ಮುಗಿದಿಲ್ಲ. ಪುಟ್ಟ ರಾಷ್ಟ್ರದ ಮೇಲೆ ಮುಗಿಬಿದ್ದಿರೋ ರಷ್ಯಾ, ಉಕ್ರೇನ್ ಅನ್ನು ಸಂಪೂರ್ಣ ಧ್ವಂಸ ಮಾಡುವಲ್ಲಿ ನಿರತವಾಗಿದೆ. ಮತ್ತೊಂದೆಡೆ ರಷ್ಯಾ ದಾಳಿಯನ್ನು ಎದುರಿಸಲು ಉಕ್ರೇನ್‌ಗೆ ಯುನೈಟೆಡ್ ಕಿಂಗ್‌ಡಮ್ ಬೆಂಬಲ ನೀಡುತ್ತಿದೆ.
ಇದರಿಂದ ಬ್ರಿಟನ್ ಮೇಲೆ ರಷ್ಯಾ ಕೆರಳಿಬಿಟ್ಟಿದೆಯಂತೆ. ಸೇಡು ತೀರಿಸಿಕೊಳ್ಳಲು ಯುಕೆ ಮೇಲೆ ದಾಳಿ ಮಾಡಲು ರಷ್ಯಾ ಪ್ಲಾನ್ ಮಾಡ್ತಿದೆ ಎಂಬ ಬಗ್ಗೆ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ.
ಯುಕೆ ಕೌಂಟರ್ ಇಂಟೆಲಿಜೆನ್ಸ್ ಮತ್ತು ಸೆಕ್ಯುರಿಟಿ ಏಜೆನ್ಸಿ MI5ನ ಹಿರಿಯ ಅಧಿಕಾರಿಗಳು ರಷ್ಯಾದ ಸೇನೆಯ ದಾಳಿಯ ಬೆದರಿಕೆಯ ಬಗ್ಗೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಮತ್ತು ಅವರ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಚೀಫ್ ಆಫ್ ಸ್ಟಾಫ್ ಸ್ಟೀವ್ ಬಾರ್ಕ್ಲೇ ಅವರಿಗೂ ವಿಷಯ ತಿಳಿಸಲಾಗಿದೆ.
ಈ ಮಾಹಿತಿಯ ಬೆನ್ನಲ್ಲೇ ಬ್ರಿಟನ್‌ನ ಗುಪ್ತಚರ ಸಂಸ್ಥೆಗಳು ಅಲರ್ಟ್ ಆಗಿವೆ. ಬ್ರಿಟನ್ ಅನ್ನು ಅವಮಾನಿಸಲು ರಷ್ಯಾ ಈ ತಂತ್ರ ಹೆಣೆದಿದೆ ಅಂತಾನೂ ಹೇಳಲಾಗ್ತಿದೆ. ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಬ್ರಿಟನ್ ಕೂಡ ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಟ್ಟಿದೆ. ಈ ನೆರವನ್ನು ಉಕ್ರೇನ್ ಸ್ವಾಗತಿಸಿತ್ತು, ಇದು ಬ್ರಿಟನ್ ರಾಣಿಯ ಅತ್ಯುತ್ತಮ ಕೊಡುಗೆ ಎಂದು ಉಕ್ರೇನ್ ಕೊಂಡಾಡಿತ್ತು.
ಈ ಮಧ್ಯೆ ಯುದ್ಧದಿಂದಾದ ನಷ್ಟವನ್ನು ಕೂಡ ರಷ್ಯಾ ಭರ್ತಿ ಮಾಡಬೇಕೆಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದರು. ಇದರಿಂದ ರಷ್ಯಾ, ಬ್ರಿಟನ್ ಮೇಲೆ ಮುನಿಸಿಕೊಂಡಿದೆ.