ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನಿರ್ಬಂಧವಿದೆ. ಆದರೆ ನೊವಾಕ್ ಜೊಕೊವಿಕ್ ಕಳೆದ ತಿಂಗಳು ಸೋಂಕಿಗೆ ತುತ್ತಾಗಿದ್ದ ಕಾರಣ ಲಸಿಕೆ ಹಾಕಿಸಿಕೊಳ್ಳಲು ಸಿದ್ಧ ಇರಲಿಲ್ಲ. ಟೂರ್ನಿಯಲ್ಲಿ ಆಡಲು ಅವರಿಗೆ ಟೂರ್ನಿಯ ವೈದ್ಯಕೀಯ ತಂಡ ವಿನಾಯಿತಿ ನೀಡಿತ್ತು. ಆದರೆ ಆಸ್ಟ್ರೇಲಿಯಾಕ್ಕೆ ಕಾಲಿಡುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಸರ್ಕಾರಿ ಅಧಿಕಾರಿಗಳು ವೀಸಾ ರದ್ದುಮಾಡಿ ಪಾರ್ಕ್ ಹೋಟೆಲ್‌ನಲ್ಲಿ ಇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೊಕೊವಿಕ್ ನ್ಯಾಯಾಲಯದ ಮೊರೆ ಹೋಗಿದ್ದರು. ಟೂರ್ನಿಯ ಆಯೋಜಕರು ಎಲ್ಲಾ ವಿಷಯ ತಿಳಿದೇ ನೀವು ಟೂರ್ನಿಯಲ್ಲಿ ಆಡಬಹುದು ಎಂದು ಹಸಿರು ನಿಶಾನೆ ನೀಡಿದ್ದರು. ಹಾಗಾಗಿಯೆ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಜೊಕೊವಿನ್ ಹೇಳಿದ್ದರು.
ನೊವಾಕ್‌ಗೆ ಕೋವಿಡ್ ಲಸಿಕೆ ಪಡೆಯದೇ ಇದ್ದರೂ ವೈದ್ಯಕೀಯ ಕಾರಣ ಹಿನ್ನೆಲೆಯಲ್ಲಿ ಟೂರ್ನಿಗೆ ಪ್ರವೇಶ ಲಭ್ಯವಾಗಿತ್ತು. ಆದರೆ, ವೈದ್ಯಕೀಯ ಕಾರಣ ಕೊಟ್ಟು ಪಡೆಯಬೇಕಾದ ವೀಸಾ ತೆಗೆದುಕೊಳ್ಳದೇ ಇದ್ದ ಕಾರಣ ಈ ಗೊಂದಲಕ್ಕೆ ಸಿಲುಕಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಲಸಿಕೆಗಳಿಗೆ ಬಹಳ ಒತ್ತು ಕೊಡಲಾಗಿದೆ. ಅಲ್ಲಿನ ಬಹುತೇಕ ರಾಜ್ಯಗಳಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಬಹುತೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಅಂಥ ಆಸ್ಟ್ರೇಲಿಯಾ ದೇಶದಲ್ಲಿ ನಿಂತು ಲಸಿಕೆ ವಿರುದ್ಧ ಜೋಕೊವಿಕ್ ಈ ರೀತಿ ಬೇಜವಬ್ದಾರಿ ಮಾತನಾಡುತ್ತಿದ್ದಾರೆ ಎಂಬುದು ಅಲ್ಲಿನ ಸರ್ಕಾರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.