ಬೆಂಗಳೂರು: ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಆರ್ಥಿಕ ನಿರ್ವಹಣೆ ಹಾಗೂ ಶಿಸ್ತಿನಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ಆರ್ಥಿಕತೆ ಉತ್ತಮವಾಗಿದ್ದರೆ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿ ಪೂರಕ, ಚುನಾವಣಾ ಒತ್ತಡಕ್ಕೆ ಸಿಲುಕದ ಬಜೆಟ್ ಇದಾಗಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೊವಿಡ್ ಬಳಿಕ ತಕ್ಷಣ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಇದಕ್ಕೆ ಬದುಕಿನಲ್ಲಿ ಮುಂದೆ ಬರಬೇಕು ಎಂಬ ಜನರ ಉತ್ಸಾಹ ಕಾರಣ. ಜನರ ಉತ್ಸಾಹದಿಂದಾಗಿಯೇ ರಾಜ್ಯದ ಆರ್ಥಿಕತೆ ಸುಧಾರಣೆಯಾಗಿದೆ. ಎಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯಾಗಿದೆ ಎಂದರು.
ನನ್ನ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಲಾಗಿದೆ ಎಂಬ ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ನನ್ನ ಅವಧಿಯಲ್ಲಿ ಹೆಚ್ಚು ಸಾಲ ಮಾಡಲಾಗಿಲ್ಲ ಎಂದು ಹೇಳಿದರು. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಮೂಲಸೌಕರ್ಯ ಸರಿದೂಗಿಸಿಕೊಂಡು ಹೋದರೆ ಕರ್ನಾಟಕ ಕಲ್ಯಾಣವಾಗಲು ಸಾಧ್ಯ. ಕೃಷಿ ಕ್ಷೇತ್ರವನ್ನು ನಂಬಿಕೊಂಡು ಶೇ.60 ಜನರಿದ್ದಾರೆ. 130 ಕೋಟಿ ಜನಸಂಖ್ಯೆಗೂ ಆಹಾರ ನೀಡುವ ಶಕ್ತಿ ನಮಗಿದೆ. ಆಹಾರ ನೀಡುವ ರೈತನಿಗೆ ಶಕ್ತಿ ತುಂಬುವ ಪಾಲಿಸಿ ಬರಬೇಕಿದೆ. ಆಗ ಮಾತ್ರ ಕೃಷಿ ಕ್ಷೇತ್ರ ಅಭಿವೃದ್ಧಿ ಆಗಲಿದೆ. ರೈತನ ಆರೋಗ್ಯಕ್ಕಾಗಿ ಯಶಸ್ವಿಸಿನಿ ಯೋಜನೆ ಜಾರಿ ಮಾಡಿದ್ದೇವೆ. 5 ಲಕ್ಷದ ವರೆಗೆ ಸಾಲ ವ್ಯಾಪ್ತಿ ಮಿತಿ ಹೆಚ್ಚಿಸಲಾಗಿದೆ. ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 1000 ರೂಪಾಯಿ ಸಹಾಯಧನ ನೀಡುವುದಾಗಿ ಘೋಷಿಸಿದರು.
ಇನ್ನು ಮಹದಾಯಿ ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ಪ್ರಾಧಿಕಾರ ರಚನೆ ಬಗ್ಗೆ ಪ್ರಸ್ತಾಪಿಸಿತ್ತು. ಅದರಂತೆ ಕೇಂದ್ರ ಸಂಪುಟ ಪ್ರಾಧಿಕಾರ ರಚನೆಗೆ ಒಪ್ಪಿಗೆ ನೀಡಿದೆ. ಮೂರು ರಾಜ್ಯಗಳಿಂದ ಮೂವರು ಸದಸ್ಯರ ಜೊತೆ ತಜ್ಞರು ಹಾಗೂ ಒಬ್ಬ ಅಧ್ಯಕ್ಷ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.