ಕೊರೋನಾ ನಿಯಂತ್ರಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರಗಳಿಗೆ ಶಾಲೆಗಳು ಮತ್ತು ಕಾಲೇಜುಗಳು ತಲೆನೋವಾಗಿ ಪರಿಣಮಿಸಿದೆ. ಹೀಗಾಗಿಯೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳನ್ನ ಬಂದ್ ಮಾಡಲಾಗಿದೆ.
ಶಾಲೆಗಳು ಕೊರೋನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿವೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಎಂಬುವಂತೆ ಆಂಧ್ರ ಪ್ರದೇಶದ ಶಾಲೆಯೊಂದರಲ್ಲಿ 19 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಕೋತವಲಸದಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ 19 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರಲ್ಲಿ 13 ಮಂದಿ 7 ನೇ ತರಗತಿಯಲ್ಲಿದ್ದರೆ, 6 ಮಂದಿ 10 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಲಕ್ಷಣರಹಿತರಾಗಿದ್ದು ಮತ್ತು ಅವರನ್ನು ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ. 60 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಅದ್ರಲ್ಲಿ 19 ಜನರು ಪಾಸಿಟಿವ್ ಆಗಿರುವುದು ಆತಂಕಕಾರಿಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಶಾಲೆಯನ್ನ ಮುಚ್ಚಲಾಗಿದೆ.
ಈ ನಡುವೆ, ಮೆಗಾ ಲಸಿಕೆ ಅಭಿಯಾನದ ಅಡಿಯಲ್ಲಿ, ಆಂಧ್ರ ಪ್ರದೇಶ ಸರ್ಕಾರವು 15-18 ವರ್ಷ ವಯಸ್ಸಿನ 25 ಲಕ್ಷ ಹದಿಹರೆಯದವರಿಗೆ ಲಸಿಕೆ ನೀಡುತ್ತಿದೆ. 5 ದಿನಗಳ ವಿಶೇಷ ಡ್ರೈವ್ ಇದಾಗಿದ್ದು ಜನವರಿ 7 ರವರೆಗು ಇರುತ್ತದೆ.