ಬೆಂಗಳೂರು: ಜೂನ್ 1 ರಿಂದ ಪೌರ ಕಾರ್ಮಿಕರಿಗೆ ತಿಂಡಿ ಭತ್ಯೆಯಾಗಿ 50 ರೂಪಾಯಿ ನೀಡಲಿದ್ದು, ನೌಕರರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ.
ಬಿಬಿಎಂಪಿಯಲ್ಲಿ ಸ್ವಚ್ಛತಾ ಕೆಲಸ ಮಾಡುವ 15,500 ಕಾರ್ಮಿಕರಿಗೆ ಬೆಳಗಿನ ಉಪಹಾರ ಭತ್ಯೆ ವ್ಯವಸ್ಥೆಯನ್ನು ಜೂನ್ 1ರಿಂದ ಜಾರಿ ಮಾಡಲಾಗುತ್ತಿದೆ. ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸಲಾಗುವುದು. ಸ್ವಚ್ಛತಾ ಕಾರ್ಯ ಮಾಡುವ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಸೇವನೆಗಾಗಿ ದಿನವೊಂದಕ್ಕೆ 50 ರೂಪಾಯಿ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಕಾಯಂ ಪೌರಕಾರ್ಮಿಕರಿಗೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಉಪಹಾರ ನೀಡಲಾಗುತ್ತಿತ್ತು. ಇಸ್ಕಾನ್ ಮೂಲಕ ಉಪಹಾರ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಬದಲಾಗಿ ಬಿಬಿಎಂಪಿ ಒಂದು ಉಪಹಾರಕ್ಕೆ ಒಂದು ದಿನಕ್ಕೆ 30 ರೂಪಾಯಿ ನೀಡುತ್ತಿತ್ತು. ಇಸ್ಕಾನ್ ನೀಡುವ ಉಪಹಾರಕ್ಕೆ ಈರುಳ್ಳಿ, ಬೆಳ್ಳುಳ್ಳಿ ಹಾಕುವುದಿಲ್ಲ, ಗುಣಮಟ್ಟ ಸರಿ ಇಲ್ಲ ಎಂದು ಪೌರಕಾರ್ಮಿಕರು ಉಪಹಾರ ಸೇವಿಸುತ್ತಿರಲಿಲ್ಲ. ಇದನ್ನು ಮನಗಂಡ ಬಿಬಿಎಂಪಿ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸಲಿದ್ದು, ಪ್ರತಿದಿನ 50 ರೂ. ನಂತೆ ಮಾಸಿಕ 1,500 ರೂ. ಪಾವತಿಸಲಾಗುತ್ತದೆ. ಬೆಂಗಳೂರಿನಲ್ಲಿ 15,500 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ 2.32 ಕೋಟಿ ರೂ. ವ್ಯಯ ಮಾಡಲಾಗುತ್ತದೆ. ತಿಂಗಳ ಆರಂಭದಲ್ಲಿ ಇಲ್ಲವೇ ವೇತನದ ಜೊತೆಗೆ ಉಪಹಾರ ಭತ್ಯೆ ನೀಡಲಾಗುವುದು ಎಂದು ಹೇಳಲಾಗಿದೆ.