ಏರ್ ಬಿಎನ್ಬಿ ಮೂಲಕ ವಿಹಾರಕ್ಕಾಗಿ ರೂಂ ಬುಕ್ ಮಾಡಿದ ದಂಪತಿ ಕೋಣೆಯಲ್ಲಿದ್ದ ಹಿಡನ್ ಕ್ಯಾಮೆರಾ ನೋಡಿ ದಂಗಾಗಿದ್ದಾರೆ. ಅಸಲಿಗೆ ಈ ಘಟನೆ ನಡೆದಿರುವುದು ಡಿ ಜನೈರೊದಲ್ಲಿ.
ಅನಾ ಲೂಸಿಯಾ ಬೆಜೆರ್ರಾ ಮತ್ತು ಜೂಲಿಯಾ ಸ್ಟೊಪ್ಪಾ ಅವರು ತಮ್ಮ ಪ್ರವಾಸಕ್ಕಾಗಿ ಆನ್‌ಲೈನ್‌ನಲ್ಲಿ ವಸತಿ ಬುಕ್ ಮಾಡಿದ್ದರು.ಈ ಜೋಡಿಯು ಬ್ರೆಜಿಲ್‌ನ ಗೋಯಾನಿಯಾದಲ್ಲಿರುವ ತಮ್ಮ ಮನೆಯಿಂದ 800 ಮೈಲು ದೂರ ಪ್ರಯಾಣಿಸಿ ರೂಂ ಸೇರಿದ್ದರು.
ಆದರೆ ಕೋಣೆಯನ್ನು ದಂಪತಿ ಪರಿಶೀಲಿಸಿದಾಗ ಹಾಸಿಗೆಯ ಎದುರು ಕ್ಯಾಮೆರಾ ಇರುವುದನ್ನು ಕಂಡು ಗಾಬರಿಗೊಂಡರು.
ಕೋಣೆಯ ಪ್ರವೇಶದ್ವಾರದ ಮೇಲಿರುವ ವಾರ್ಡ್ರೋಬ್ ಅನ್ನು ನೋಡಿದಾಗ ಕ್ಯಾಮೆರಾದಂತ ಹೊಳಪು ಕಂಡಿತ್ತು. ಜೂಲಿಯಾ ಸ್ಟೊಪ್ಪಾ ತಮ್ಮ ಮೊಬೈಲ್ ಫೋನ್‌ನ ಫ್ಲ್ಯಾಷ್‌ನೊಂದಿಗೆ ಫೋಟೋ ತೆಗೆದಾಗ ಪ್ರಕಾಶಮಾನವಾದ ಹೊಳಪು ಕಾಣಿಸಿಕೊಂಡಿದೆ. ಅದು ನಿಜವಾಗಿಯೂ ಕ್ಯಾಮೆರಾ ಲೆನ್ಸ್ ಎಂಬುದು ಗೊತ್ತಾಗಿದೆ.
ತಕ್ಷಣ ದಂಪತಿಗಳು ಏರ್ ಬಿಎನ್‌ಬಿಗೆ ದೂರು ನೀಡುವ ಮೊದಲು ಘಟನೆಯನ್ನು ಪೊಲೀಸರಿಗೆ ವರದಿ ಮಾಡಿದರು. Airbnb ಈ ಸಮಸ್ಯೆಯನ್ನು ಅರಿತುಕೊಂಡಿದ್ದು ದಂಪತಿಗೆ ಹಣ ಮರುಪಾವತಿಸಿದೆ. ತನಿಖೆಯ ಸಹಕಾರಕ್ಕೆ ಸಿದ್ಧವಿರುವುದಾಗಿ ಹೇಳಿದೆ. ರೂಂ ಬಾಡಿಗೆ ನೀಡಿದ್ದ ಮಾಲೀಕರು ವಿದೇಶಿ ಪ್ರಜೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆ ಬಗ್ಗೆ ಬ್ರೆಜಿಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.