ಬ್ರೆಜಿಲ್: ಆರ್ಥರ್ ಒ ಉರ್ಸೊ ಹೆಸರು ಕೆಲ ತಿಂಗಳಿನಿಂದ ಭಾರಿ ಸುದ್ದಿಯಲ್ಲಿದೆ. ಬ್ರೆಜಿಲಿಯನ್ ಈ ಮಾಡೆಲ್ ಏಕಕಾಲದಲ್ಲಿ 9 ಮಹಿಳೆಯರನ್ನು ವಿವಾಹವಾಗಿ ಸುದ್ದಿಯಾಗಿದ್ದ. ಈಗ ಮತ್ತೊಮ್ಮೆ ಸುದ್ದಿಯಾಗಲು ಕಾರಣ, ಈತನ 9 ಮಂದಿ ಪತ್ನಿಯರ ಪೈಕಿ ಒಬ್ಬಾಕೆ ವಿಚ್ಛೇದನ ಬಯಸುತ್ತಿದ್ದಾಳಂತೆ. ಇದರಿಂದ ಉರ್ಸೋ ಖಿನ್ನತೆಗೆ ಒಳಗಾಗಿದ್ದಾನಂತೆ!
ಜಾಮ್ ಪ್ರೆಸ್‌ನೊಂದಿಗೆ ಮಾತನಾಡಿದ ಆತ, ನನ್ನ ಮೊದಲ ಪತ್ನಿ ಲುವಾನಾ ಕಜಾಕಿಯನ್ನು ಮದುವೆಯಾದ ನಂತರ ಇತರ ಎಂಟು ಮಂದಿಯನ್ನು ವಿವಾಹವಾಗಿದ್ದೆ. ಇದಕ್ಕೆ ಕಾರಣ ನಾನು ಮುಕ್ತ ಪ್ರೀತಿಯನ್ನು ಬಯಸುವವನು, ಪ್ರೀತಿ ಎಲ್ಲರ ಸ್ವತ್ತಾಗಬೇಕು, ಏಕಪತ್ನಿತ್ವದ ವಿರುದ್ಧ ನನ್ನ ಪ್ರತಿಭಟನೆ ಇದೆ ಎಂದಿದ್ದಾನೆ.
ಆದರೆ ಈಗ ಪತ್ನಿಯರಲ್ಲಿ ಒಬ್ಬಾಕೆಯಾಗಿರುವ ಅಗಾತಾ ವಿಚ್ಛೇದನ ಬಯಸುತ್ತಿದ್ದು ನನಗೆ ಅತೀವ ದುಃಖವಾಗಿದೆ. ಎರಡು ವರ್ಷ ಈಕೆಯ ಜತೆಗಿದ್ದು ಬಹಳ ಸಂತೋಷ ಹಂಚಿದ್ದಾಳೆ. ಅವಳ ನಿರ್ಧಾರ ನನ್ನನ್ನು ಖಿನ್ನತೆಗೆ ತಳ್ಳಿದೆ ಎಂದಿದ್ದಾನೆ.
ಈ ಡಿವೋರ್ಸ್ ಬಯಸಿರುವ ಅಗಾತಾ ತನ್ನ ಪತಿ ಏಕಪತ್ನಿ ವೃತಸ್ಥ ಆಗಿರಬೇಕು ಎಂದು ಬಯಸುತ್ತಿದ್ದಾಳೆ, ಎಲ್ಲವನ್ನೂ ತನಗಾಗಿ ಮಾತ್ರ ಮೀಸಲು ಇಡುವಂತೆ ಕೇಳುತ್ತಿದ್ದಾಳೆ. ಆದರೆ ಇದು ನನ್ನಿಂದ ಸಾಧ್ಯವಿಲ್ಲ. ಎಲ್ಲವನ್ನೂ ಒಬ್ಬರಿಗೇ ಹಂಚುವಲ್ಲಿ ಅರ್ಥವಿಲ್ಲ ಎಂದಿರುವ ಅರ್ಥರ್, ನಾನು ಪ್ರತ್ಯೇಕತೆಯ ಬಗ್ಗೆ ತುಂಬಾ ದುಃಖಿತನಾಗಿದ್ದೆ ಎಂದಿದ್ದಾನೆ.
‘ನಾನು ಹೆಂಡತಿಯನ್ನು ಕಳೆದುಕೊಂಡಿದ್ದೇನೆ ಎಂದು ನನಗೆ ತಿಳಿದಿದೆ, ಆದರೆ ಈ ಸಮಯದಲ್ಲಿ ನಾನು ಅವಳ ಮನಸ್ಸನ್ನು ಬದಲಾಯಿಸುವಲ್ಲಿ ಯಾವುದೇ ಅರ್ಥವಿಲ್ಲ’ ಎಂದಿದ್ದಾನೆ.