ಫುಟ್ಬಾಲ್ ಲೋಕದ ದಂತಕಥೆ ಪೀಲೆ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಕೊಲೊನ್ ಟ್ಯೂಮರ್ ಚಿಕಿತ್ಸೆಗಾಗಿ ಸಾವೋ ಪಾಲೊ ನಗರದಲ್ಲಿನ ಆಲ್ಬರ್ಟ್ ಐನ್ ಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
81 ವರ್ಷದ ಪೀಲೆ ಸೆಪ್ಟೆಂಬರ್ 4ರಂದು ಗೆಡ್ಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಮತ್ತೆ ಅವರು ಕೊಲೊನ್ ಟ್ಯೂಮರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆಪ್ಟೆಂಬರ್ ನಲ್ಲಿ ಗುರುತಿಸಲಾಗಿದ್ದ ಕೊಲೊನ್ ಟ್ಯೂಮರ್ ನ ಆನಂತರದ ಚಿಕಿತ್ಸೆಗಾಗಿ ಸಾವೋ ಪಾಲೊದಲ್ಲಿನ ಆಲ್ಬರ್ಟ್ ಐನ್ ಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ವೈದ್ಯಕೀಯ ತಂಡ ಹೇಳಿದೆ. ಅಲ್ಲದೇ, ಅವರ ಆರೋಗ್ಯ ಸ್ಥಿರವಾಗಿದ್ದು, ಮುಂದಿನ ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳುವ ವಿಶ್ವಾಸವಿದೆ ಎಂದು ವೈದ್ಯರು ಹೇಳಿದ್ದಾರೆ.
ಪೀಲೆ 6 ತಿಂಗಳಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 2019ರಲ್ಲಿ ಮೂತ್ರನಾಳ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬ್ರೆಜಿಲ್ ತಂಡ ಮೂರು ಬಾರಿ ವಿಶ್ವಕಪ್ ಗೆಲ್ಲುವುದರಲ್ಲಿ ಪೀಲೆ ಪಾತ್ರ ಮಹತ್ತರವಾಗಿತ್ತು. 1958, 1962, 1970ರಲ್ಲಿ ಬ್ರೆಜಿಲ್ ನ ಫುಟ್ಬಾಲ್ ತಂಡ ಮೂರು ವಿಶ್ವಕಪ್ ಗಳನ್ನು ಗೆದ್ದಿತ್ತು. ಈ ತಂಡದಲ್ಲಿ ಅದ್ಭುತ ಆಟಗಾರರಾಗಿ ಪೀಲೆ ಹೊರ ಹೊಮ್ಮಿದ್ದರು. ಪೀಲೆ 17ನೇ ವರ್ಷದಲ್ಲಿ ಮೊದಲ ವಿಶ್ವಕಪ್ ಗೆದ್ದ ಸಂಭ್ರಮ ಅನುಭವಿಸಿದ್ದರು. ಸ್ವೀಡನ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಪೀಲೆ ಎರಡು ಗೋಲು ಬಾರಿಸಿ ಮಿಂಚಿದ್ದರು. ಅಂದಿನಿಂದಲೇ ಪೀಲೆಗೆ ಜನರು ಪ್ರೀತಯಿಂದ ಓ ರೆ ಎಂದೇ ಕರೆಯುತ್ತಾರೆ. ಅಂದರೆ, ದಿ ಕಿಂಗ್ ಎಂಬ ಅರ್ಥದಲ್ಲಿ ಅವರನ್ನು ಜನರು ಪ್ರೀತಿಯಿಂದ ಹೊಗಳುತ್ತಾರೆ.
ಫುಟ್ಬಾಲ್ ವಿಶ್ವಕಪ್ ನಲ್ಲಿ ಪೀಲೆ 92 ಪಂದ್ಯಗಳನ್ನಾಡಿ 77 ಗೋಲ್ ಗಳನ್ನು ಬಾರಿಸಿ ಸರ್ವಕಾಲಿಕ ಇತಿಹಾಸ ಬರೆದಿದ್ದಾರೆ.