ಬ್ರೆಜಿಲ್ ನ ಬಾರ್ಸಿಲೋಸ್‌ನಲ್ಲಿ ಮಧ್ಯಮ ಗಾತ್ರದ ವಿಮಾನ ಪತನಗೊಂಡು 14 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ರಾಜಧಾನಿಯಿಂದ ಸುಮಾರು 400 ಕಿಮೀ(248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಅಪಘಾತ ಸಂಭವಿಸಿದೆ.
ಬ್ರೆಜಿಲ್‌ನ ಉತ್ತರ ಅಮೆಜಾನ್ ರಾಜ್ಯದಲ್ಲಿ ವಿಮಾನ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಬಾರ್ಸಿಲೋಸ್‌ನ ಮೇಯರ್ ಎಡ್ಸನ್ ಡಿ ಪೌಲಾ ರಾಡ್ರಿಗಸ್ ಮೆಂಡೆಸ್ ಹೇಳಿದ್ದಾರೆ. ಮಧ್ಯಮ ಗಾತ್ರದ ವಿಮಾನದ ಅಪಘಾತವನ್ನು ದೃಢಪಡಿಸಿದ ಅವರು ಪೈಲಟ್ ಮತ್ತು ಸಹ-ಪೈಲಟ್ ಜೊತೆಗೆ ವಿಮಾನದಲ್ಲಿ 12 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಯುಎಸ್ ಪ್ರಜೆಗಳೂ ಇದ್ದಾರೆ. ಘಟನೆಯಲ್ಲಿ ಬದುಕುಳಿದವರು ಯಾರೂ ಇಲ್ಲ ಎಂದು ಹೇಳಲಾಗಿದೆ.
ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿಮೀ ದೂರದಲ್ಲಿರುವ ನಗರದಲ್ಲಿ ವಿಮಾನ ಇಳಿಯಲು ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪತನಗೊಂಡಿರಬಹುದು, ಲ್ಯಾಂಡಿಂಗ್ ಸಮಯದಲ್ಲಿ ಭಾರೀ ಮಳೆಯಾಗುತ್ತಿತ್ತು ಎಂದು ಹೇಳಲಾಗಿದೆ.