ಮುಂಗುಸಿಯು ತೊಟ್ಟಿಲಿನಲ್ಲಿದ್ದ ಮಗುವನ್ನು ಹಾವಿನಿಂದ ರಕ್ಷಿಸಿದ ಕಥೆಯನ್ನು ನೀವೆಲ್ರೂ ಕೇಳಿರಬಹುದು. ಮಾನವನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಪ್ರಾಣಿಗಳು ತನ್ನ ಮಾಲೀಕ ಅಥವಾ ತನ್ನನ್ನು ಸಾಕಿರುವ ಕುಟುಂಬದ ಸದಸ್ಯರು ಸಂಕಷ್ಟದಲ್ಲಿದ್ದಾಗ ಕಾಪಾಡುತ್ತವೆ. ಅಂಥದ್ದೊಂದು ಘಟನೆ ಸೌತ್ ಆಫ್ರಿಕಾದಲ್ಲಿ ನಡೆದಿದೆ. ಮಂಚದ ಹಿಂದೆ ಇದ್ದ ವಿಷಕಾರಿ ಹಾವಿನಿಂದ ಮಾಲೀಕನನ್ನು ನಾಯಿ ಕಾಪಾಡಿದೆ.
ಕುತೂಹಲಕಾರಿ ನಿದರ್ಶನದಲ್ಲಿ ರೊಟ್‌ವೀಲರ್ ನಾಯಿಯು ಮಂಚದ ಮೇಲೆ ಬೊಗಳುತ್ತಿತ್ತು ಮತ್ತು ಅದರ ಮಾಲೀಕರು ಮಂಚದ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದಾಗಲೆಲ್ಲಾ ಕೆಲ ದಿನಗಳವರೆಗೆ ದೂರ ತಳ್ಳುತ್ತಿತ್ತು. ಇದನ್ನು ಗಮನಿಸಿದ ನಂತರ, ನಾಯಿಯ ಮಾಲೀಕರು ಅದು ಏನನ್ನು ಸಂಕೇತಿಸುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಂಚದ ಕೆಳಗೆ ಹುಡುಕಾಟ ನಡೆಸಿದರು. ಆಗ ಅಲ್ಲಿ ಅವರು ಅಪಾಯಕಾರಿ ಕಪ್ಪು ಮಾಂಬಾ ಹಾವು ಅಡಗಿರುವುದನ್ನು ಕಂಡುಹಿಡಿದರು.
ದಕ್ಷಿಣ ಆಫ್ರಿಕಾದ ಹಾವು ಹಿಡಿಯುವ ನಿಕ್ ಇವಾನ್ಸ್ ಈ ಭಯಾನಕ ಕಥೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಘಟನೆ ಮತ್ತು ನಂತರದ ರಕ್ಷಣೆಯನ್ನು ವಿವರಿಸಿದ್ದಾರೆ.
ಕಪ್ಪು ಮಾಂಬಾಗಳು ಸ್ಲಿಮ್, ಕಂದು, ಹೆಚ್ಚು ವಿಷಕಾರಿ ಹಾವುಗಳು. ದಾಳಿ ಮಾಡಿದಾಗ ದೊಡ್ಡ ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತವೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ ಕಪ್ಪು ಮಾಂಬಾ ಕಚ್ಚುವಿಕೆಯು ಚಿಕಿತ್ಸೆ ನೀಡದೆ ಬಿಟ್ಟರೆ 20 ನಿಮಿಷಗಳಲ್ಲಿ ಸಾವಿಗೆ ಕಾರಣವಾಗಬಹುದು.