ಮೈಸೂರು : ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆಯ ಉತ್ಪಾದನೆ ಹಾಗೂ ಆರ್ಥಿಕ ವಹಿವಾಟು ಹೆಚ್ಚಿಸಿ ಬ್ರ್ಯಾಂಡ್ ವರ್ಚಸ್ಸು ನೀಡಲು ಯೋಜನೆ ರೂಪಿಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಕಾರ್ಖಾನೆಯು ಸದ್ಯಕ್ಕೆ ವಾರ್ಷಿಕ ₹35 ಕೋಟಿಯಷ್ಟು ವಹಿವಾಟು ನಡೆಸುತ್ತಿದೆ. ಲೋಕಸಭಾ ಚುನಾವಣೆ ಬಂದಿರುವುದರಿಂದ ಶಾಯಿ ತಯಾರಿಕೆಗೆ ಬೇಡಿಕೆ ಬಂದಿದೆ. ಈ ವರ್ಷ ವಹಿವಾಟು ₹77 ಕೋಟಿ ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ.
ಮನೆ ಗೋಡೆಗೆ ಬಳಿಯುವಂತಹ ಬಣ್ಣಗಳನ್ನು ತಯಾರಿಸಲು ಸೂಚಿಸಲಾಗಿದೆ. ಮುಕ್ತ ಮಾರುಕಟ್ಟೆ ಅಲ್ಲದೆ, ಸರ್ಕಾರಿ ಕಟ್ಟಡಗಳು, ಶಾಲಾ- ಕಾಲೇಜು, ಹಾಸ್ಟೆಲ್ಗಳಿಗೆ ಬೇಕಾಗುವ ಬಣ್ಣ, ಎಮಲ್ಶನ್ ಇತ್ಯಾದಿಗಳನ್ನು ಈ ಕಾರ್ಖಾನೆಯಲ್ಲೇ ತಯಾರಿಸುವ ಚಿಂತನೆ ಇದೆ. ಇದಕ್ಕಾಗಿ, ಬಣ್ಣಗಳ ಉದ್ಯಮದಲ್ಲಿ ಪಳಗಿರುವ ಪರಿಣತರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ. ವೈಜ್ಞಾನಿಕವಾಗಿ ಮಾರುಕಟ್ಟೆಯನ್ನೂ ವಿಸ್ತರಿಸಿ, ಸ್ಪರ್ಧಾತ್ಮಕ ಬೆಲೆಯಲ್ಲಿ ಪೇಂಟ್ ಸಿಗುವಂತೆ ಮಾಡಲಾಗುವುದು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.