ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಸೂಲಿ ಮಾಡುವ ಪ್ರಕರಣಗಳ ಹೆಚ್ಚಳಕ್ಕೆ ಸಾರಿಗೆ ಇಲಾಖೆ ಬ್ರೇಕ್ ಇನ್ಸ್ಪೆಕ್ಟರ್ ಗಳಿಗೆ ಮೇಲಾಧಿಕಾರಿಗಳಿಂದ ಸೂಚನೆ ನೀಡಲಾಗಿದೆ.
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಆದಾಯ ಕಡಿಮೆ ಆಗದಂತೆ ಮತ್ತು ನಿಯಮ ಉಲ್ಲಂಘನೆ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ, ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿರುವುದು, ಓವರ್ಲೋಡ್, ಪರ್ಮಿಟ್ ಇಲ್ಲದಿರುವುದು, ವಾಯುಮಾಲಿನ್ಯ, ಶಬ್ದ ಮಾಲಿನ್ಯ ಸೇರಿದಂತೆ ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಬೇಕು ಎಂದು ಹೇಳಲಾಗಿದೆ.
ಪ್ರತಿ ಆರ್‌ಟಿಓ ಕಚೇರಿ ವ್ಯಾಪ್ತಿಯಲ್ಲಿ ಮಾಸಿಕ 400 ಪ್ರಕರಣಗಳನ್ನು ದಾಖಲಿಸಲು ಸೂಚನೆ ನೀಡಲಾಗಿದೆ. ಈ ಮೊದಲು 250ರಿಂದ 300 ಪ್ರಕರಣ ದಾಖಲಿಸುವ ಗುರಿ ನೀಡಲಾಗಿತ್ತು. ಆದಾಯ ಹೆಚ್ಚಳದ ಜೊತೆಗೆ ನಿಯಮ ಉಲ್ಲಂಘನೆ ಪ್ರಕರಣ ಕಡಿಮೆ ಮಾಡುವ ಆದ್ಯತೆಯೊಂದಿಗೆ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಸೂಲಿ ಪ್ರಕರಣಗಳನ್ನು ಹೆಚ್ಚಳ ಮಾಡುವಂತೆ ಸಾರಿಗೆ ಇಲಾಖೆ ಜಂಟಿ ಆಯುಕ್ತರು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಯಶವಂತಪುರ, ಕೋರಮಂಗಲ, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಇಂದಿರಾನಗರ, ಕೆ.ಆರ್. ಪುರ, ರಾಜಾಜಿನಗರ, ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಗುರಿ ನಿಗದಿಪಡಿಸಲಾಗಿದೆ. ಸಾರಿಗೆ ಇಲಾಖೆಗೆ ಕಳೆದ ವರ್ಷ 11500 ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಲಾಗಿತ್ತು. ಈ ಬಾರಿ ಸಾರಿಗೆ ಇಲಾಖೆಗೆ 13000 ಕೋಟಿ ರೂ. ಸಂಗ್ರಹ ಗುರಿ ನಿಗದಿಪಡಿಸಲಾಗಿದೆ.