ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯವಾಗಿದ್ದ ವಿದ್ಯಾರ್ಥಿ ಅಂಗಾಂಗ ದಾನ ಮಾಡುವ ಮೂಲಕ ಆತನ ತಂದೆ, ತಾಯಿ ಮಗನ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯ ನಾರಾಯಣಗೌಡ(17) ಡಿಸೆಂಬರ್ 6 ರಂದು ಕಾಲೇಜಿಗೆ ತೆರಳುವಾಗ ಅಪಘಾತವಾಗಿತ್ತು. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಮೆದುಳು ನಿಷ್ಕ್ರಿಯವಾಗಿತ್ತು. ಅಂಗಾಂಗ ದಾನದ ಬಗ್ಗೆ ಪೋಷಕರಿಗೆ ವೈದ್ಯರು ಮನವಿ ಮಾಡಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವೈದ್ಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿದ್ದು ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದ್ದಾರೆ. ರಾಜ್ಯ ಅಂಗಾಂಗ ದಾನ ನಿರ್ವಹಣೆ ಸಂಸ್ಥೆ ಜೀವ ಸಾರ್ಥಕತೆಯ ಮಾರ್ಗದರ್ಶನದಲ್ಲಿ ಕುಟುಂಬದವರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರು ಮಂದಿಗೆ ವಿದ್ಯಾರ್ಥಿಯಿಂದ ಪಡೆದ ಅಂಗಾಂಗಗಳನ್ನು ಕಸಿ ಮಾಡಲಾಗಿದೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ವಿದ್ಯಾರ್ಥಿ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬದವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಏಕೈಕ ಪುತ್ರನಾರಾಯಣ ಗೌಡನನ್ನು ರಮೇಶ ದಂಪತಿ ಕಳೆದುಕೊಂಡಿದ್ದು, ಪುತ್ರನ ಸಾವಿನ ನೋವಿನಲ್ಲಿಯೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ತೋರಿದ್ದಾರೆ.