
ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಮೆದುಳಿನ ಆಘಾತ ಸಂಭವಿಸುತ್ತದೆ.
ಇದರಿಂದ ವ್ಯಕ್ತಿಗೆ ಮಾತನಾಡಲು ಕಷ್ಟವಾಗುತ್ತದೆ, ದೇಹದ ಯಾವುದಾದರೂ ಭಾಗದಲ್ಲಿ ನಿಶ್ಯಕ್ತಿ, ದೃಷ್ಟಿ ಹೀನತೆ, ದೇಹದ ಸಮತೋಲನದಲ್ಲಿ ನಿಯಂತ್ರಣ ಕಳೆದುಕೊಳ್ಳುವುದು ಮತ್ತು ಪ್ರಜ್ಞಾಹೀನ ಸ್ಥಿತಿ ಕಂಡು ಬರಬಹುದು.
ಈ ಸಂದರ್ಭದಲ್ಲಿ ವೈದ್ಯರು ಎಂ.ಆರ್.ಐ. ನಡೆಸುತ್ತಾರೆ. ಔಷಧ ಆರಂಭಿಸುವ ಮುನ್ನ ಆಘಾತಕ್ಕೊಳಗಾದ ವ್ಯಕ್ತಿ ಈ ಲಕ್ಷಣ ಕಂಡು ಬಂದ ಮೊದಲ 4-5 ಗಂಟೆಯೊಳಗೆ ಆಸ್ಪತ್ರೆಗೆ ದಾಖಲಾಗಬೇಕು. ಈ ಅವಧಿಯನ್ನು ‘ಗೋಲ್ಡನ್ ಅವರ್’ ಎಂದು ಕರೆಯುತ್ತಾರೆ. ಹೀಗಾದಾಗ ಮಾತ್ರ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧ ನೀಡಲು ಸಾಧ್ಯ.
ಗ್ರಾಮೀಣ ಭಾಗದ ಜನರೂ ಸೇರಿದಂತೆ ಎಲ್ಲರಿಗೂ ಇದರ ಅರಿವು ಮೂಡುವಂತಾಗಬೇಕು. ಮೆದುಳು ಆಘಾತಕ್ಕೆ ಒಳಗಾದ ವ್ಯಕ್ತಿಗಳನ್ನು ಸರಿಯಾಗಿ ನೋಡಿಕೊಳ್ಳುವುದು ಮತ್ತು ಸೂಕ್ತ ಸಮಯಕ್ಕೆ ಔಷಧಿ ನೀಡುವ ಬಗ್ಗೆ ಎಲ್ಲರಿಗೂ ಮಾಹಿತಿ ದೊರೆತರೆ ಮಾತ್ರ ಇದರಿಂದ ಗುಣಮುಖವಾಗುವುದು ಸಾಧ್ಯ.