![](https://kannadadunia.com/wp-content/uploads/2025/02/vinay-kumar.jpg)
ಕೊಪ್ಪಳ: ದೇಗುಲ ವಿನ್ಯಾಸ, ಕಟ್ಟಡ ನಿರ್ಮಾಣದಲ್ಲಿ ಹೆಸರಾಗಿದ್ದ ಖ್ಯಾತ ಇಂಜಿನಿಯರ್ ಓರ್ವರು ಡೆತ್ ನೋಡ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.
ವಿನಯ್ ಕುಮಾರ್ (38) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್. ಉಡುಪಿ ಜಿಲ್ಲೆಯ ಬ್ರಹ್ಮಾವರ ಮೂಲದ ವಿನಯ್ ಕುಮಾರ್ ವಿಭಿನ್ನ ಶೈಲಿಯ ದೇವಾಲಯಗಳ ಕಟ್ಟಡ ವಿನ್ಯಾಸ ಮಾಡುತ್ತಿದ್ದರು. ಬ್ರಹ್ಮಾವರದ ಎಂ.ಕೆ. ಟೆಂಪಲ್ ಕನ್ ಸ್ಟ್ರಕ್ಷನ್ ಮಾಲೀಕರು ಆಗಿದ್ದಾರೆ. ಬ್ರಹ್ಮಾವರದಿಂದ ಬಂದು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.
ಇಂಜಿನಿಯರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಸಾವಿಗೂ ಮುನ್ನ ವಿನಯ್ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನಯ್ ಕುಮಾರ್, ಗ್ರ್ಯಾನೈಟ್, ಅಮೃತ ಶಿಲೆ, ಸ್ಥಳೀಯವಾಗಿ ಲಭ್ಯವಾಗುವ ಕಚ್ಚಾ ಸಾಮಗ್ರಿ, ಶಿಲೆಗಳನ್ನು ಬಳಸಿಕೊಂಡು ವಿಭಿನ್ನ ಶೈಲಿಯಲ್ಲಿ ದೇಗುಲಗಳ ನಿರ್ಮಾಣ ಮಾಡುತ್ತಿದ್ದರು. ಕೊಟ್ಟೂರು ಬಸವೇಶ್ವರ ದೇವಸ್ಥಾನ, ಕನಕಗಿರಿ ರಸ್ತೆ ಬಳಿಯ ಬೀರಲಿಂಗೇಶ್ವರ ದೇವಸ್ಥಾನ, ಕಿಂದಿಕ್ಯಾಂಪ್ ನಲ್ಲಿರುವ ರಾಮ ದೇವಾಲಯಗಳ ನಿರ್ಮಾಣ ಕೈಗೆತ್ತಿಕೊಂಡಿದ್ದರು.
ಗಂಗಾವತಿಯ ಕೋಟಯ್ಯ ಕ್ಯಾಂಪ್ ನಲ್ಲಿ ಶ್ರೀರಾಮ ದೇವಸ್ಥಾನ ನಿರ್ಮಿಸಿದ್ದರು. ಫೆ.26ರಿಂದ ದೇಗುಲ ಆರಂಭೋತ್ಸವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು. ಆದರೆ ಇದೀಗ ದೇಗುಲಗಳ ವಿನ್ಯಾಸದ ಇಂಜಿನಿಯರ್ ಆಗಿದ್ದ ವಿನಯ್ ಕುಮಾರ್ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.