ನಾನು 11 ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡ ಭೂಪನ ಮೇಲೆ ಬಿಹಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಾಧೇಪುರ ಜಿಲ್ಲೆಯ 84 ವರ್ಷದ ಬ್ರಹ್ಮದೇವ್ ಮಂಡಲ್ ವಿರುದ್ಧ ಪುರೈನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ (PHC) ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಬ್ರಹ್ಮದೇವ್, 11 ತಿಂಗಳಲ್ಲಿ 11 ಕೊರೋನಾ ಲಸಿಕೆಗಳನ್ನು ಸ್ವೀಕರಿಸಿದ್ದೇನೆ ಎಂಬ ಹೇಳಿಕೆಯು, ಮಾಧೇಪುರ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಭಾರಿ ಮುಜುಗರವನ್ನು ಉಂಟುಮಾಡಿದೆ. ಹೀಗಾಗಿ ಪ್ರಾಥಮಿಕ ಕೇಂದ್ರ ಬ್ರಹ್ಮದೇವ್ ವಿರುದ್ಧ ಸರ್ಕಾರ ಮತ್ತು ಸರ್ಕಾರಿ ನೌಕರರಿಗೆ ವಂಚಿಸಿದ್ದಾರೆಂದು ಪೊಲೀಸ್ ದೂರು ದಾಖಲಿಸಿದ್ದಾರೆ.
ಪುರೈನಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ದೂರು ಅರ್ಜಿಯನ್ನು ಪುರೈನಿ ಪೊಲೀಸ್ ಠಾಣೆಗೆ ಸಲ್ಲಿಸಿದ ನಂತರ ಬ್ರಹ್ಮದೇವ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ‘ಬ್ರಹ್ಮದೇವ್ ಮಂಡಲ್ ಅವರು ಆರೋಗ್ಯ ಅಧಿಕಾರಿಗಳಿಗೆ ಸುಳ್ಳು ಹೇಳಿ ವಿವಿಧ ಗುರುತಿನ ಚೀಟಿಗಳನ್ನು ಬಳಸಿ, ವಿವಿಧ ದಿನಾಂಕಗಳಲ್ಲಿ 11 ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬ್ರಹ್ಮದೇವ್ ಮಂಡಲ್ ವಿರುದ್ಧ ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರು ಘೋಷಿಸಿದ ಆದೇಶಕ್ಕೆ ಅಸಹಕಾರ), ಸೆಕ್ಷನ್ 419 ಮತ್ತು 420 (ವಂಚನೆ)ರ ಎಫ್ಐಆರ್ ಅಡಿಯಲ್ಲಿ ದಾಖಲಿಸಲಾಗಿದೆ.
ಲಸಿಕೆಗಳನ್ನ ಪಡೆದಿರುವುದರಿಂದ ತನ್ನ ಕೀಲು ನೋವು ಗುಣವಾಗಿದೆ. ಲಸಿಕೆಯಿಂದ ನನ್ನ ಹಸಿವು ಹೆಚ್ಚಾಗಿದೆ, ಲಸಿಕೆ ಪಡೆದರೆ ಸಾಕಷ್ಟು ಪ್ರಯೋಜನಗಳಿವೆ. ಹಾಗಾಗಿ ಸಾಧ್ಯವಾದಷ್ಟು ಲಸಿಕೆ ಪಡೆಯುವುದು ನನ್ನ ಆಸೆ. ಈಗ ಹನ್ನೊಂದು ಡೋಸ್ ಪಡೆದಿದ್ದೇನೆ, ಕನಿಷ್ಠ ಇನ್ನು ಮೂರು ಡೋಸ್ ಲಸಿಕೆ ಪಡೆಯಬೇಕು ಎಂದುಕೊಂಡಿದ್ದೇನೆ ಎಂದು ಮಂಡಲ್ ಇತ್ತೀಚೆಗೆ ಹೇಳಿಕೊಂಡಿದ್ದರು.