ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಳಂದ ಶಾಸಕ ಬಿ.ಆರ್. ಪಾಟೀಲ್ ಮತ್ತೆ ತಲೆನೋವು ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಅವರು, ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾಗಿರುವ ಬಿ.ಆರ್. ಪಾಟೀಲ್ ಅವರು KRIDL ಕಾಮಗಾರಿಗಳನ್ನು ಲಂಚ ಪಡೆದು ನೀಡಿರುವುದಾಗಿ ಆರೋಪ ಬಂದಿದೆ. ಇಂತಹ ಆರೋಪಗಳನ್ನು ಹೊತ್ತುಕೊಂಡು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪ ಹೊತ್ತು ಅಧಿವೇಶನಕ್ಕೆ ಬಂದರೆ ಅದನ್ನು ಒಪ್ಪಿಕೊಂಡಂತಾಗುತ್ತದೆ. ನನ್ನ ವಿರುದ್ಧದ ಆರೋಪಗಳ ಸಂಬಂಧ ತನಿಖೆ ನಡೆಸಿ ಸತ್ಯಾಸತ್ವತೆ ಹೊರಬರಲು ತನಿಖೆಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಆರೋಪ ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧವಿದ್ದೇನೆ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಪಾಟೀಲ್ ಮನವಿ ಮಾಡಿದ್ದಾರೆ.
ಕಳೆದ ವಿಧಾನಸಭೆಯ ವಿಷಯ ಪ್ರಸ್ತಾಪಿಸಿರುವ ಅವರು 2013ರಲ್ಲಿ ಕಾಮಗಾರಿಗಳನ್ನು KRIDL ಸಂಸ್ಥೆಗೆ ನೀಡಿದ್ದೆ. ಕಾರಣಾಂತರದಿಂದ ಕಾಮಗಾರಿಗಳು ಪೂರ್ಣವಾಗಿರಲಿಲ್ಲ. ಕಳೆದ ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ ನನ್ನನ್ನು ಲಂಚ ಪಡೆದು KRIDL ಗೆ ಕಾಮಗಾರಿ ಕೊಟ್ಟಿರುವುದಾಗಿ ಅನುಮಾನದಿಂದ ನೋಡಲಾಗಿತ್ತು. ಸಚಿವ ಪ್ರಿಯಾಂಕ್ ಖರ್ಗೆ ಅನುಪಸ್ಥಿತಿಯಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ ಅನುಮಾನ ಬರುವಂತೆ ಮಾತನಾಡಿದ್ದರು. ಅದಾದ ನಂತರವೂ ಪ್ರಿಯಾಂಕ್ ಖರ್ಗೆ ಅವರು ಕಾಮಗಾರಿಗಳ ಬಗ್ಗೆ ಸಭೆ ನಡೆಸಿಲ್ಲ ಎಂದು ದೂರಿದ್ದಾರೆ.
ಇಂತಹ ಆರೋಪಗಳನ್ನು ಹೊತ್ತುಕೊಂಡು ನಾನು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ತಕ್ಷಣವೇ ತನಿಖಾ ಆಯೋಗ ರಚನೆ ಮಾಡಬೇಕು ಎಂದು ಕೋರಿದ್ದಾರೆ.