ಶಿವಮೊಗ್ಗ: ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇದೇ ನನ್ನ ಕೊನೆಯ ಚುನಾವಣೆ ಎಂದು ಮುಖ್ಯಮಂತ್ರಿಗಳ ಸಲಹೆಗಾರರಾದ ಆಳಂದ ಶಾಸಕ ಬಿ.ಆರ್. ಪಾಟೀಲ್ ಹೇಳಿದ್ದಾರೆ.
ಶಿವಮೊಗ್ಗದ ಪ್ರೆಸ್ ಟ್ರಸ್ಟ್ ಪತ್ರಿಕಾ ಭವನದಲ್ಲಿ ಜಿಲ್ಲಾ ಜಾಗೃತ ಮತದಾರರ ವೇದಿಕೆ ಆಯೋಜಿಸಿದ್ದ ಚುನಾವಣೆ ಸುಧಾರಣೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಿನ ಚುನಾವಣೆ ವ್ಯವಸ್ಥೆಯಲ್ಲಿ ಸ್ಪರ್ಧಿಸಲು ಸಾಧ್ಯವೇ ಇಲ್ಲದಂತಾಗಿದೆ. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಇದೇ ನನ್ನ ಕೊನೆಯ ಚುನಾವಣೆ. ಚುನಾವಣೆಯಲ್ಲಿ ಹಣವೇ ಪ್ರಧಾನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ದುಡ್ಡಿದ್ದವರು ಮಾತ್ರ ಚುನಾವಣೆ ಎದುರಿಸುವ ಸ್ಥಿತಿ ಬಂದಿದೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಕೂಡ ಪಕ್ಷದ ಚಿಹ್ನೆಯಡಿ ನಡೆಯಬೇಕು. ಇಂದು ಚುನಾವಣೆಗಳು ಜಾತಿ, ಧರ್ಮ, ಹಣದ ಆಧಾರದಲ್ಲಿ ನಡೆಯುತ್ತಿವೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಕೂಡ ಸುಲಭವಾಗಿಲ್ಲ. ಲಕ್ಷ ಲಕ್ಷ ಹಣ ಖರ್ಚು ಮಾಡುವ ಪರಿಸ್ಥಿತಿ ಇದೆ. ಇಂತಹ ವ್ಯವಸ್ಥೆಯಲ್ಲಿ ನಮ್ಮಂತವರು ಹೇಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಕ್ಷೇತ್ರದ ಮದುವೆ, ಮುಂಜಿ, ಸಾವಿನ ಮನೆಗೆ ದಿನ ಭೇಟಿ ನೀಡುವವರು ಗೆಲ್ಲುತ್ತಿದ್ದಾರೆ. ಜನರ ಪರವಾಗಿ ಸದನದಲ್ಲಿ ಮಾತನಾಡುವವರಿಗೆ ಬೆಲೆ ಇಲ್ಲದಂತಾಗಿದೆ. ವ್ಯಕ್ತಿವಾದ, ಜಾತಿವಾದ, ಕೋಮುವಾದಗಳು ದೇಶದ ಚುನಾವಣೆಯ ದಿಕ್ಕನ್ನು ಬದಲಿಸಿವೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ನಾವು ನಿರ್ಭೀತವಾಗಿ ಮತ ಚಲಾಯಿಸಬೇಕು ಎಂದು ಹೇಳಲಾಗುತ್ತದೆ. ಆದರೆ, ಜಾತಿ, ಧರ್ಮ, ಹಣ, ಹೆಂಡದ ಆಧಾರದಲ್ಲಿ ಚುನಾವಣೆಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಯ ಪರವಾಗಿ ನಿರ್ಭೀತವಾಗಿ ಮತ ಚಲಾಯಿಸಬೇಕು. ಅಭ್ಯರ್ಥಿಯ ಚಿಂತನೆ, ಜನಪರ ಕಾಳಜಿ ನೋಡಿ ಮತ ಚಲಾಯಿಸಬೇಕು. ಆದರೆ ಅಭ್ಯರ್ಥಿ ಎಷ್ಟು ಹಣ, ಹೆಂಡ ಕೊಡುತ್ತಾರೆ ಎಂದು ನೋಡಿ ವೋಟು ಹಾಕುತ್ತಾರೆ ಎಂದರು.