
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುನಿಸಿಕೊಂಡಿದ್ದ ಕಲಬುರಗಿ ಜಿಲ್ಲೆ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರೊ. ರಾಜೀವ್ ಗೌಡ ರಾಜೀನಾಮೆಯಿಂದಾಗಿ ಈ ಹುದ್ದೆ ತೆರವಾಗಿತ್ತು. ಮುಖ್ಯಮಂತ್ರಿಗಳ ನೀತಿ ನಿರೂಪಣೆ ವಿಶೇಷ ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡಿದ ಬಿ.ಆರ್. ಪಾಟೀಲ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಲಸವಿಲ್ಲ, ಅಧಿಕಾರವೂ ಇಲ್ಲದ ಹುದ್ದೆ ತೆಗೆದುಕೊಂಡು ಏನು ಮಾಡಲಿ ಎಂದು ಮುನಿಸಿಕೊಂಡಿದ್ದರು. ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ ಸಚಿವರು ಮಾತು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಬಿ.ಆರ್. ಪಾಟೀಲ್ ಅವರಿಗೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಮಹತ್ವದ ಹುದ್ದೆ ಕಲ್ಪಿಸಿದ್ದಾರೆ.
ರಾಜ್ಯ ನೀತಿ ಆಯೋಗ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ಸಂಪುಟ ದರ್ಜೆಯ ಉತ್ತಮ ಸ್ಥಾನಮಾನ ನೀಡಿ ಮನವೊಲಿಸಿದ್ದಾರೆ.