ಬೆಂಗಳೂರು: ಜೀವನೋಪಾಯಕ್ಕಾಗಿ 4 ಚಕ್ರದ ವಾಹನ ಹೊಂದಿದ ಕುಟುಂಬದವರಿಗೆ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.
ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಶಾಂತಾರಾಮ ಸಿದ್ಧಿ ಅವರು, ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ವಾಹನ ಕುಟುಂಬದವರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿದ್ದು, ಸಭಾನಾಯಕರಾದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿ, ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ಒಂದು ವಾಣಿಜ್ಯ ವಾಹನ ಕುಟುಂಬದವರಿಗೆ ಕೂಡ ಬಿಪಿಎಲ್ ಕಾರ್ಡ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ
ಸ್ವಂತ ಬಳಕೆಗಾಗಿ ನಾಲ್ಕು ಚಕ್ರದ ವಾಹನ ಹೊಂದಿದ ಕುಟುಂಬದವರಿಗೆ ಬಿಪಿಎಲ್ ಕಾರ್ಡ್ ವಿತರಿಸುವುದಿಲ್ಲ ಎಂಬ ನಿಯಮವಿದೆ. ಜೀವನೋಪಾಯಕ್ಕಾಗಿ ಟ್ಯಾಕ್ಸಿ, ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್ ಸೇರಿ ಯಾವುದಾದರೂ ಒಂದು ವಾಣಿಜ್ಯ ವಾಹನ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ನೀಡಲು ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.