ಬೆಂಗಳೂರು: ನಕಲಿ ದಾಖಲೆ ನೀಡಿ ಶ್ರೀಮಂತರು ಪಡೆದುಕೊಂಡ ಬಿಪಿಎಲ್ ಕಾರ್ಡ್ ಗಳನ್ನು ಮಾರ್ಚ್ 31 ರೊಳಗೆ ಹಿಂತಿರುಗಿಸಲು ಗಡುವು ನೀಡಲಾಗಿದೆ.
ರಾಜ್ಯಾದ್ಯಂತ ಸುಮಾರು 10 ಲಕ್ಷ ನಕಲಿ ಬಿಪಿಎಲ್ ಕಾರ್ಡ್ ಗಳು ಇವೆ ಎಂದು ಅಂದಾಜಿಸಲಾಗಿದೆ. ಆಹಾರ ಇಲಾಖೆ ಸಂಗ್ರಹಿಸಿದ ಮಾಹಿತಿಯಲ್ಲಿ 10 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಶ್ರೀಮಂತರು ಪಡೆದುಕೊಂಡಿರುವುದು ಗೊತ್ತಾಗಿದ್ದು ಇಂತಹ ಕಾರ್ಡುಗಳನ್ನು ಮಾರ್ಚ್ 31ರೊಳಗೆ ಸ್ವಯಂ ಪ್ರೇರಿತವಾಗಿ ಹಿಂತಿರುಗಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಿದ್ದಾರೆ.
ಅನರ್ಹರು ಪಡಿತರ ಚೀಟಿ ಪಡೆದುಕೊಂಡಿದ್ದರೆ ಸಾರ್ವಜನಿಕರು ಮಾಹಿತಿ ನೀಡಬಹುದು. ಹೀಗೆ ಮಾಹಿತಿ ನೀಡಿದವರಿಗೆ 400 ರೂಪಾಯಿ ಬಹುಮಾನ ನೀಡಲಾಗುತ್ತದೆ. ಅದೇ ರೀತಿ ಪಡಿತರವನ್ನು ಅಕ್ರಮ ಸಾಗಾಣಿಕೆ, ಕಾಳಸಂತೆಯಲ್ಲಿ ಮಾರಾಟ ಮಾಡುವುದರ ಬಗ್ಗೆ ಮಾಹಿತಿ ನೀಡಿದವರಿಗೆ ಪ್ರಕರಣ ಸಾಬೀತಾದ ನಂತರ ಒಟ್ಟು ದಾಸ್ತಾನಿನ ಮೌಲ್ಯದ ಶೇಕಡ 5ರಷ್ಟು ನಗದು ಬಹುಮಾನ ನೀಡಲಾಗುವುದು.
ಸರ್ಕಾರಿ ಸ್ವಾಮ್ಯದ ಸಂಸ್ಥೆ ನೌಕರರು, ನಿಗಮ-ಮಂಡಳಿಗಳ ಸಂಸ್ಥೆ ಅಧಿಕಾರಿಗಳು, ನೌಕರರು, ತೆರಿಗೆ ಪಾವತಿಸುವ ಕುಟುಂಬದವರು, ಗ್ರಾಮೀಣ ಭಾಗದಲ್ಲಿ ಮೂರು ಹೆಕ್ಟೇರ್ ಗಿಂತ ಹೆಚ್ಚು ಒಣ ಅಥವಾ ನೀರಾವರಿ ಜಮೀನು ಹೊಂದಿರುವ ಕುಟುಂಬದವರು, ನಗರದಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ ಹೊಂದಿದವರು, ವಾರ್ಷಿಕ 1.20 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿದ ಕುಟುಂಬದವರು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೆ ಹಿಂತಿರುಗಿಸಲು ತಿಳಿಸಲಾಗಿದೆ.