
ಅಕ್ಟೋಬರ್ 2024 ರ ಮಾಹೆಗೆ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿದಾರರಿಗೆ ಪಡಿತರ ಆಹಾರಧಾನ್ಯವನ್ನು ಬಿಡುಗಡೆ ಮಾಡಲಾಗಿದೆ.
ಅಕ್ಟೋಬರ್ 2024 ರ ಮಾಹೆಯ ಪಡಿತರ ವಿತರಣೆಯಲ್ಲಿ ಅಂತ್ಯೋದಯ (ಎಎವೈ) ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ ಅಕ್ಕಿ 21 ಕೆಜಿ, ಜೋಳ 14 ಕೆಜಿ ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಪಿಎಚ್‍ಎಚ್ (ಬಿಪಿಎಲ್) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ ಅಕ್ಕಿ 3 ಕೆಜಿ, ಜೋಳ 2 ಕೆಜಿ ಉಚಿತವಾಗಿ ವಿತರಿಸಲಾಗುತ್ತದೆ. ಅಂತರರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯುವವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪಡಿತರ ಚೀಟಿದಾರರು ತಮ್ಮ ಜಾತಿ ಪ್ರಮಾಣ ಪತ್ರವನ್ನು (ಆರ್‍ಡಿ ಸಂಖ್ಯೆ ಹೊಂದಿರುವ) ತೆಗೆದುಕೊಂಡು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಜಿಲ್ಲೆಯಲ್ಲಿ 29,430 ಅಂತ್ಯೋದಯ ಹಾಗೂ 3,55,200 ಬಿಪಿಎಲ್ ಒಟ್ಟು 3,84,630 ಪಡಿತರ ಚೀಟಿಗಳು ಚಾಲ್ತಿಯಲ್ಲಿರುತ್ತವೆ.
ಅಕ್ಟೋಬರ್ ಮಾಹೆ 1ನೇ ತಾರೀಖಿನಿಂದ ತಿಂಗಳ ಕೊನೆಯವರೆಗೆ ಬೆಳಿಗ್ಗೆ 07 ರಿಂದ ಮಧ್ಯಾಹ್ನ 12 ಗಂಟೆಯವರೆಗೆ, ಸಾಯಂಕಾಲ 04 ರಿಂದ ರಾತ್ರಿ 09 ಗಂಟೆಯವರೆಗೆ ಮಂಗಳವಾರ ರಜಾ ಹೊರತುಪಡಿಸಿ ಉಳಿದ ದಿನಗಳಂದು ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ- ಕೆವೈಸಿ ಮಾಡುವ ಹಾಗೂ ಎನ್‍ಎಫ್‍ಎಸ್‍ಎ ಯಡಿ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಕಾರಣ ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಲು ತಿಳಿಸಿದೆ.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡುವಂತಿಲ್ಲ. ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು.
ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರಧಾನ್ಯವನ್ನು ದಾಸ್ತಾನು ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಜರುಗಿಸಲಾಗುವದು. ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ, ಸಂಬಂಧಿಸಿದ ತಹಶೀಲದಾರ ಕಛೇರಿ ಅಥವಾ ಜಂಟಿ ನಿರ್ದೇಶಕರ ಕಛೇರಿ ಆಹಾರ ಇಲಾಖೆ ಇವರಿಗೆ ದೂರು ಸಲ್ಲಿಸಬಹುದು ಎಂದು ಧಾರವಾಡ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.