ಬೆಂಗಳೂರು: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ದೇಶದ 80 ಕೋಟಿ ಬಡವರಿಗೆ ಮೇ ಮತ್ತು ಜೂನ್ ತಿಂಗಳ ತಲಾ 5 ಕೆಜಿ ಅಕ್ಕಿ ಉಚಿತವಾಗಿ ವಿತರಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ 26 ಸಾವಿರ ಕೋಟಿ ರೂಪಾಯಿ ಕಾಯ್ದಿರಿಸಿದೆ.
ದೇಶದಲ್ಲಿ ಕೊರೋನಾ ಎರಡನೇ ಅಲೆ ಜನ ಸಾಮಾನ್ಯರಿಗೆ ಸಂಕಷ್ಟ ತಂದ ಹಿನ್ನೆಲೆಯಲ್ಲಿ ಬಡವರಿಗೆ ಉಚಿತವಾಗಿ ಅಕ್ಕಿ ವಿತರಿಸಲಾಗುವುದು. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ಎರಡು ತಿಂಗಳು ನೀಡಲಾಗುತ್ತದೆ.
ರಾಜ್ಯದಲ್ಲಿ ಮೇ ತಿಂಗಳಿಂದ ಹೊಸ ವ್ಯವಸ್ಥೆಯಡಿ ಪಡಿತರ ನೀಡಲಾಗುತ್ತದೆ. ಬಿಪಿಎಲ್ ಕಾರ್ಡು ಹೊಂದಿದ ಪ್ರತಿ ಸದಸ್ಯರಿಗೆ 2 ಕೆಜಿ ಅಕ್ಕಿ, 3 ಕೆಜಿ ರಾಗಿ ಮತ್ತು ಪ್ರತಿ ಕಾರ್ಡಿಗೆ 2 ಕೆಜಿ ಗೋಧಿ ನೀಡಲಾಗುತ್ತದೆ. ಅಂತ್ಯೋದಯ ಕಾರ್ಡ್ ಹೊಂದಿದ ಫಲಾನುಭವಿಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ನೀಡಲಾಗುವುದು. ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಬದಲಿಗೆ ಓಟಿಪಿ ಮೂಲಕ ರೇಷನ್ ಹಂಚಿಕೆ ಮಾಡಲು ಅನುಮತಿ ನೀಡಬೇಕೆಂಬ ಒತ್ತಾಯ ಪಡಿತರ ವಿತರಕರಿಂದ ಕೇಳಿಬಂದಿದೆ. ಮೇ 10 ರಿಂದ ರೇಷನ್ ವಿತರಿಸಲಾಗುವುದು ಎನ್ನಲಾಗಿದೆ.