ಬೆಂಗಳೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ತೆರವಾದ ನಂತರ ಹೊಸ ಪಡಿತರ ಚೀಟಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ ಇಲ್ಲಿದೆ.
ಹೊಸದಾಗಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡುಗಳನ್ನು ನಿಗದಿಗಿಂತ ಹೆಚ್ಚುವರಿ ಮಂಜೂರು ಮಾಡಬಾರದು. ಮೂರು ತಿಂಗಳಿನಿಂದ ಪಡಿತರ ಪಡೆದ ಕಾರ್ಡ್ ಗಳನ್ನು ರದ್ದು ಮಾಡಬೇಕು. ಬಾಕಿ ಉಳಿದ ಅರ್ಜಿಗಳನ್ನು ಏಕಕಾಲದಲ್ಲಿ ವಿಲೇವಾರಿ ಮಾಡಬಾರದು ಎಂದು ಸರ್ಕಾರ ನಿರ್ಬಂಧ ಹೇರಿ ಕಟ್ಟುನಿಟ್ಟಿನ ಜಾರಿಗೆ ಆಹಾರ ಇಲಾಖೆಗೆ ಆದೇಶಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ನಿಗದಿಗಿಂತ ಹೆಚ್ಚುವರಿಯಾಗಿ ಸುಮಾರು 13 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ನೀಡಲಾಗಿದೆ. ಹೆಚ್ಚುವರಿ ಕಾರ್ಡುಗಳಿಂದ ಪ್ರತಿವರ್ಷ ಸರ್ಕಾರಕ್ಕೆ ನೂರಾರು ಕೋಟಿ ಹೊರೆಯಾಗುತ್ತಿದೆ. ಹೀಗಾಗಿ ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಳ ಮಂಜೂರಾತಿಗೆ ನಿರ್ಬಂಧ ಹೇರಲಾಗಿದೆ.
ನಿಗದಿಗಿಂತ ಹೆಚ್ಚುವರಿ ಕಾರ್ಡುಗಳನ್ನು ಮಂಜೂರು ಮಾಡಬಾರದು, ಮೂರು ತಿಂಗಳಿನಿಂದ ಪಡಿತರ ಪಡೆದ ಕಾರ್ಡ್ ಗಳನ್ನು ರದ್ದುಪಡಿಸಬೇಕು. ಒಂದೇ ಬಾರಿಗೆ ಬಾಕಿ ಉಳಿದ ಅರ್ಜಿಗಳ ವಿಲೇವಾರಿ ಮಾಡಬಾರದು. ಆರ್ಥಿಕವಾಗಿ ಸಬಲರು ಪಡೆದ ಕಾರ್ಡ್ ಗಳನ್ನು ತಕ್ಷಣವೇ ರದ್ದುಪಡಿಸಬೇಕು. ರದ್ದಾದ ಕಾರ್ಡ್ ಗಳ ಆಧಾರದ ಮೇಲೆ ಹಂತ ಹಂತವಾಗಿ ಅರ್ಜಿ ವಿಲೇವಾರಿ ಮಾಡಬೇಕು ಎಂದು ಹೇಳಲಾಗಿದೆ.
ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ಎಪಿಎಲ್ ಕಾರ್ಡ್ ನೀಡಲಾಗುತ್ತದೆ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿ ಮಾತ್ರವೇ ಅಥವಾ ಪಡಿತರಕ್ಕಾಗಿಯೇ ಎಂಬುದನ್ನು ಪ್ರತ್ಯೇಕವಾಗಿ ನಮೂದಿಸಿ ಪಡಿತರ ಚೀಟಿ ಮಂಜೂರು ಮಾಡಲಾಗುತ್ತದೆ. ಕೇವಲ ಗುರುತಿನ ಚೀಟಿಗಾಗಿ ಕಾರ್ಡ್ ಪಡೆಯುವವರಿಗೆ ಪಡಿತರ ಸಿಗುವುದಿಲ್ಲ ಎನ್ನಲಾಗಿದೆ.