
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರ ಪತ್ತೆ ಕಾರ್ಯ ಮುಂದುವರೆಸಲಾಗಿದೆ. ಸರ್ಕಾರಿ ನೌಕರರು ಪಡೆದುಕೊಂಡಿದ್ದ 19,105 ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ. ಇಂತಹ ಕಾರ್ಡ್ ಗಳನ್ನು ಎಪಿಎಲ್ ಗೆ ಬದಲಾಯಿಸಲಾಗಿದೆ.
ಉಳ್ಳವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದನ್ನು ಪತ್ತೆಮಾಡಲು ಆಹಾರ ಇಲಾಖೆ ಕ್ರಮ ಕೈಗೊಂಡಿದ್ದು, ಕಂದಾಯ ಇಲಾಖೆಯ ಇ -ಜನ್ಮ ತಂತ್ರಾಂಶ ಬಳಸಿ ಅಕ್ರಮ ಕಾರ್ಡ್ ಗಳನ್ನು ಪತ್ತೆ ಮಾಡಲಾಗುತ್ತಿದೆ.
ಹೀಗೆ ಅಕ್ರಮವಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳ ಪತ್ತೆ ಮಾಡುತ್ತಿದ್ದಂತೆ, ಕೆಲವು ಸರ್ಕಾರಿ ನೌಕರರು ತಮ್ಮ ಹೆಸರನ್ನು ತೆಗೆಸಿ ಕುಟುಂಬದವರನ್ನು ಮಾತ್ರ ಉಳಿಸಿಕೊಂಡು ರೇಷನ್ ಪಡೆಯುತ್ತಿದ್ದಾರೆ. ಇಂತಹ ಅಕ್ರಮ ಕಾರ್ಡ್ ಗಳನ್ನು ಕೂಡ ಪತ್ತೆ ಮಾಡುವ ಕಾರ್ಯ ಕೈಗೊಳ್ಳಲಾಗಿದೆ.
ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಸಂಸ್ಥೆ, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್ ಪಾವತಿಸುವವರು ಬಿಪಿಎಲ್ ಕಾರ್ಡ್ ಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ.
ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಕೃಷಿಭೂಮಿ, ನಗರ ಪ್ರದೇಶದಲ್ಲಿ 1 ಸಾವಿರ ಚ. ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಕುಟುಂಬದವರು ಬಿಪಿಎಲ್ ಕಾರ್ಡ್ ಗಳನ್ನು ಪಡೆದುಕೊಳ್ಳುವಂತಿಲ್ಲ. ಹೀಗಿದ್ದರೂ, ಕೂಡ ಕೆಲವರು ಅಕ್ರಮವಾಗಿ ಅಂತ್ಯೋದಯ, ಬಿಪಿಲ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದು, ಆಹಾರ ಇಲಾಖೆ ಕ್ರಮ ಕೈಗೊಂಡಿದೆ.