ಬೆಂಗಳೂರು: ಬಿಪಿಎಲ್ ಕಾರ್ಡ್ ವಿತರಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಸದ್ಯಕ್ಕೆ ಬಿಪಿಎಲ್ ಕಾರ್ಡ್ ವಿತರಣೆ ಇಲ್ಲ. ಹಳೆಯ ಅರ್ಜಿಗಳ ವಿಲೇವಾರಿ ನಂತರವೇ ಹೊಸ ಅರ್ಜಿಗಳಿಗೆ ಆಹ್ವಾನ ನೀಡಲಾಗುವುದು ಎಂದು ಹೇಳಲಾಗಿದೆ.
ಬಡ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ವಿತರಣೆಗಾಗಿ ಆದ್ಯತೆ ಮೇರೆಗೆ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸಬೇಕಿದೆ. ಸುಮಾರು ಎರಡು ವರ್ಷಗಳಿಂದ ಅರ್ಜಿ ಆಹ್ವಾನಿಸಿಲ್ಲ. ಇದರಿಂದಾಗಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ, ಹೆಚ್ಚುವರಿ ಅಕ್ಕಿ ಬದಲು ಹಣ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ.
ಸುಮಾರು ಎರಡೂವರೆ ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಇನ್ನೂ ನಾಲ್ಕೈದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಹೊಸದಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಹೊಸದಾಗಿ ಬಿಪಿಎಲ್ ಕಾರ್ಡ್ ವಿತರಿಸಿದರೆ ಪಡಿತರ ವಿತರಣೆ ಕಾರ್ಡ್ ಪಡೆದುಕೊಂಡವರಿಗೆ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ನೀಡಬೇಕಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎನ್ನುವ ಕಾರಣದಿಂದ ವಿನಾಕಾರಣ ಅರ್ಜಿಗಳನ್ನು ಆಹ್ವಾನಿಸದೇ ನೆಪ ಹೇಳಲಾಗುತ್ತಿದೆ ಎಂದು ಹೇಳಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವವರು ಉಚಿತ ಆಹಾರ ಧಾನ್ಯ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿದ್ದು, ಈಗಾಗಲೇ ಗುರಿ ಮೀರಿ ಕಾರ್ಡ್ ಗಳನ್ನು ವಿತರಿಸಲಾಗಿದೆ. ಮತ್ತೆ ಲಕ್ಷಾಂತರ ಕಾರ್ಡ್ ಗಳನ್ನು ವಿತರಿಸಿದರೆ ಹೊರೆಯಾಗಲಿದೆ. ರಾಜ್ಯದಲ್ಲಿ 2013ರ ಜನಸಂಖ್ಯೆ ಆಧಾರದ ಮೇಲೆ 1.15 ಕೋಟಿ ಪಡಿತರ ಚೀಟಿ ವಿತರಿಸುವ ಗುರಿ ನಿಗದಿಪಡಿಸಿದ್ದು, 1.48 ಕೋಟಿ ಕಾರ್ಡ್ ಗಳನ್ನು ವಿತರಿಸಲಾಗಿದೆ. ಹಳೆಯ ಅರ್ಜಿಗಳೇ ಸುಮಾರು 2 ಲಕ್ಷಕ್ಕೂ ಅಧಿಕ ಇರುವುದರಿಂದ ಇವುಗಳನ್ನು ವಿಲೇವಾರಿ ಮಾಡಿದ ನಂತರ ಹೊಸ ಅರ್ಜಿಗಳ ಸ್ವೀಕರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.