ಬೆಂಗಳೂರು: ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದವರಿಗೆ ಸರ್ಕಾರ ಶಾಕ್ ನೀಡಿದೆ. ಒಂದೇ ವರ್ಷದಲ್ಲಿ 4.13 ಲಕ್ಷ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ.
ಅಕ್ರಮವಾಗಿ ಪಡಿತರ ಚೀಟಿ ಪಡೆದವರನ್ನು ಪತ್ತೆ ಮಾಡಿದ ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿ ಮೃತಪಟ್ಟಿರುವ 5.25 ಲಕ್ಷ ಸದಸ್ಯರ ಹೆಸರುಗಳನ್ನು ಪಡಿತರ ಚೀಟಿಯಿಂದ ಕೈಬಿಡಲಾಗಿದೆ.
ಅನರ್ಹರು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ಹಿಂತಿರುಗಿಸುವಂತೆ ಸರ್ಕಾರದಿಂದ ಸಾಕಷ್ಟು ಸಮಯ ನೀಡಲಾಗಿತ್ತು. ಆದರೆ, ಬಹುತೇಕರು ಕಾರ್ಡ್ ವಾಪಸ್ ಮಾಡದ ಹಿನ್ನೆಲೆಯಲ್ಲಿ ಸರ್ಕಾರದಿಂದ ಕ್ರಮಕೈಗೊಳ್ಳಲಾಗಿದೆ.
ತೆರಿಗೆ ಇಲಾಖೆ, ಕಂದಾಯ ಇಲಾಖೆಯಿಂದ ದತ್ತಾಂಶ ಪಡೆದು ಅನರ್ಹ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಪಡಿತರ ಸೋರಿಕೆ ತಡೆಯುವ ನಿಟ್ಟಿನಲ್ಲಿ ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅನರ್ಹರು ಸುಳ್ಳು ದಾಖಲೆ ನೀಡಿ ಪಡೆದುಕೊಂಡ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಪತ್ತೆ ಮಾಡುವ ಕಾರ್ಯ ಮುಂದುವರೆಸಲಾಗಿದೆ. ಮೃತಪಟ್ಟ ಫಲಾನುಭವಿಗಳ ಹೆಸರನ್ನು ಪತ್ತೆ ಮಾಡಿ ಕೈಬಿಡಲಾಗುತ್ತಿದೆ ಎನ್ನಲಾಗಿದೆ.