ಬೆಂಗಳೂರು: ಹೊಸ ಪಡಿತರ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ. ಬಣಕಾರ ಅವರು ರಾಜ್ಯದಲ್ಲಿ ಹೊಸ ಪಡಿತರ ಚೀಟಿ ನೀಡುವ ಹಾಗೂ ಹೆಸರು ಸೇರ್ಪಡೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದಾಗ ಸಚಿವರು ಉತ್ತರ ನೀಡಿದ್ದಾರೆ.
ಹೊಸ ಬಿಪಿಎಲ್ ಪಡಿತರ ಕಾರ್ಡ್ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ಬೇರೆ ಬೇರೆ ಸಂದರ್ಭಗಳಲ್ಲಿ ರೇಷನ್ ಕಾರ್ಡ್ ಕೇಳುತ್ತಿದ್ದು, ಹೊಸ ಪಡಿತರ ಚೀಟಿ ನೀಡುವ ಪ್ರಕ್ರಿಯೆಯನ್ನು ಆದ್ಯತೆ ಮೇಲೆ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಈ ಹಿಂದೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶವಿತ್ತು. ಅದನ್ನು ನಿಲ್ಲಿಸಿದ್ದು ಸಮಸ್ಯೆ ಬಗೆಹರಿಸಿ ಎಂದು ಸ್ಪೀಕರ್ ಸೂಚಿಸಿದ್ದು, ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣಭೈರೇಗೌಡ, ಕೇಂದ್ರ ಸರ್ಕಾರ ನೀಡಿದ ಶೇಕಡ 60ರಷ್ಟು ಮೀರಿ ರಾಜ್ಯದಲ್ಲಿ ಶೇಕಡ 80 ರಷ್ಟು ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಕೆಲವು ನಿರ್ದಿಷ್ಟ ಸೂಚನೆ ಮೀರಲಾಗಿದೆ. ಆರೋಗ್ಯ ವಿಚಾರಕ್ಕೆ ಬಂದಾಗ ಎಲ್ಲರಿಂದಲೂ ಬಿಪಿಎಲ್ ಕಾರ್ಡ್ ಗೆ ಬೇಡಿಕೆ ಇದೆ. ಹೀಗಾಗಿ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.