ಬೆಂಗಳೂರು: ಇಂದಿನಿಂದ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಬಾಕಿ ಇರುವ ಪಡಿತರ ಚೀಟಿ ಅರ್ಜಿಗಳ ವಿಲೇವಾರಿಗೆ ಸರ್ಕಾರ ಅನುಮತಿ ನೀಡಿಲ್ಲ.
ಆಹಾರ ಇಲಾಖೆ 2,95,986 ಅರ್ಜಿಗಳ ವಿಲೇವಾರಿಗೆ ಅನುಮತಿ ಕೋರಿ ಎರಡು ತಿಂಗಳಾಗಿದೆ. ಹೊಸ ಪಡಿತರ ಚೀಟಿ, ತಿದ್ದುಪಡಿ, ಸೇರ್ಪಡೆಗೆ ಅನುಮತಿ ಕೋರಿ ಇದುವರೆಗೆ ಆಹಾರ ಇಲಾಖೆಗೆ 39,04,798 ಅರ್ಜಿಗಳು ಸಲ್ಲಿಕೆಯಾಗಿವೆ. 9,60,641 ಅರ್ಜಿಗಳು ತಿರಸ್ಕೃತಗೊಂಡಿವೆ.
ರಾಜ್ಯದಲ್ಲಿ ಇನ್ನು ಮುಂದೆ ಹೊಸ ಬಿಪಿಎಲ್ ಕಾರ್ಡ್ ಸದ್ಯಕ್ಕೆ ಸಿಗುವುದು ಅನುಮಾನವೆನ್ನಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇಕಡ 76.04, ನಗರ ಪ್ರದೇಶದಲ್ಲಿ ಶೇಕಡ 49.36 ಸೇರಿ 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದ್ದರೂ, ರಾಜ್ಯದಲ್ಲಿ ಇದಕ್ಕಿಂತ ಹೆಚ್ಚಿನ ಬಿಪಿಎಲ್ ಕಾರ್ಡ್ ಗಳನ್ನು ನೀಡಲಾಗಿದೆ.
ರಾಜ್ಯದಲ್ಲಿ 3,92,54,052 ಫಲಾನುಭವಿಗಳಿಗೆ 1,16,98,551 ಬಿಪಿಎಲ್ ಕಾರ್ಡ್ ನೀಡಲಾಗಿದ್ದು, ನಿಗದಿಗಿಂತ ಹೆಚ್ಚಿನ ಪ್ರಮಾಣದ ಬಿಪಿಎಲ್ ಕಾರ್ಡ್ ಗಳನ್ನು ನೀಡಲಾಗಿದೆ. ಹೆಚ್ಚುವರಿಯಾಗಿ 13,27,882 ಬಿಪಿಎಲ್ ಕಾರ್ಡುಗಳನ್ನು ನೀಡಿದ್ದು, ಸರ್ಕಾರದ ಮೇಲೆ ಆರ್ಥಿಕ ಹೋರೆಯಾಗುತ್ತಿದೆ. ಹೀಗಾಗಿ ಹೊಸ ಬಿಪಿಎಲ್ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.