
ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿದ ಅನರ್ಹರನ್ನು ಗುರುತಿಸುವ ಕಾರ್ಯಕ್ಕೆ ಆಹಾರ ಇಲಾಖೆ ಚುರುಕು ನೀಡಿದೆ.
ತೆರಿಗೆ ಪಾವತಿದಾರರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರಾಗಿರುವ ಕುಟುಂಬದವರು, ಮನೆಗಳನ್ನು ಬಾಡಿಗೆ ನೀಡಿದವರು, 7.5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದವರು, ಸ್ವಂತಕ್ಕೆ ನಾಲ್ಕು ಚಕ್ರದ ವಾಹನ ಹೊಂದಿದವರು ಬಿಪಿಎಲ್, ಅಂತ್ಯೋದಯ ಕಾರ್ಡ್ ಪಡೆದುಕೊಳ್ಳುವಂತಿಲ್ಲ.
ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಸಾಬೀತಾದಲ್ಲಿ ಇದುವರೆಗೂ ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಪಡಿತರ ಮತ್ತು ಇತರೆ ಧಾನ್ಯಗಳ ಮೊತ್ತವನ್ನು ಅಕ್ಕಿ ಕೇಜಿಗೆ ತಲಾ 35 ರೂ.ನಂತೆ ಮರಳಿಸಬೇಕು. ಜೊತೆಗೆ ಕ್ರಿಮಿನಲ್ ಕೇಸ್ ಎದುರಿಸಬೇಕಾಗುತ್ತದೆ.
ರಾಷ್ಟ್ರೀಯ ಆಹಾರ ಭದ್ರತೆಯ ಕಾಯ್ದೆಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇಕಡ 76.04, ನಗರ ಪ್ರದೇಶದಲ್ಲಿ ಶೇಕಡ 49.36 ಸೇರಿ 3,58,87,666 ಫಲಾನುಭವಿಗಳಿಗೆ 1,03,70,666 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ 3,93,29,981 ಫಲಾನುಭವಿಗಳಿಗೆ 1,16,51,209 ಬಿಪಿಎಲ್ ಕಾರ್ಡ್ ನೀಡಲಾಗಿದೆ. ನಿಗದಿಗಿಂತ 14 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಸುಳ್ಳು ದಾಖಲೆ ನೀಡಿ ಪಡೆದುಕೊಂಡ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಗಳನ್ನು ಹಿಂತಿರುಗಿಸುವಂತೆ ಆಹಾರ ಇಲಾಖೆ ಅನೇಕ ಬಾರಿ ಅವಕಾಶ ನೀಡಿದೆ. ಇದೀಗ ಪರಿಶೀಲನಾ ಕಾರ್ಯಕ್ಕೆ ಮತ್ತಷ್ಟು ಚುರುಕು ನೀಡಲಾಗಿದೆ. ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದವರು ಆಯಾ ತಾಲೂಕು ಕಚೇರಿಗೆ ತೆರಳಿ ಸ್ವಯಂ ಪ್ರೇರಿತವಾಗಿ ವಾಪಸ್ ನೀಡಬೇಕು. ಆಹಾರ ಇಲಾಖೆಯೇ ಪತ್ತೆ ಮಾಡಿದಲ್ಲಿ ಇದುವರೆಗೂ ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಅಕ್ಕಿ ಅಥವಾ ಇತರೆ ಧಾನ್ಯಗಳ ಮೊತ್ತವನ್ನು ವಸೂಲಿ ಮಾಡಲಾಗುವುದು. ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎನ್ನಲಾಗಿದೆ.