ಬೆಂಗಳೂರು: ನಿಯಮ ಮೀರಿ ಬಿಪಿಎಲ್ ಕಾರ್ಡ್ ಪಡೆದು ಕೊಂಡಿರುವ 21,232 ಸರ್ಕಾರಿ ನೌಕರರಿಗೆ ದಂಡ ಹಾಕಲಾಗಿದೆ.
ಬಡವರಿಗೆ ಮೀಸಲಾದ ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಗಳನ್ನು ಕೆಲವು ಸರ್ಕಾರಿ ನೌಕರರು ಹೊಂದಿರುವುದು ಆಹಾರ ಇಲಾಖೆ ಪರಿಶೀಲನೆ ಸಂದರ್ಭದಲ್ಲಿ ಗೊತ್ತಾಗಿದೆ. ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳನ್ನು ಪಡೆದುಕೊಂಡಿರುವ ಸರ್ಕಾರಿ ನೌಕರರಿಗೆ ನೋಟಿಸ್ ನೀಡಲಾಗಿದೆ.
ಕೆಲವರು ಇತ್ತೀಚೆಗಷ್ಟೇ ಸರ್ಕಾರಿ ಹುದ್ದೆಗೆ ಸೇರಿದ್ದು, ತಂದೆ-ತಾಯಿ, ಕುಟುಂಬದವರು ಹೊಂದಿರುವ ಬಿಪಿಎಲ್ ಕಾರ್ಡ್ ನಲ್ಲಿ ಹೆಸರು ಹೊಂದಿದ್ದಾರೆ. ಅಂತಹ ಕೆಲವರು ಹೆಸರು ತೆಗೆಸಿದ್ದಾರೆ. ಮತ್ತೆ ಕೆಲವರು ಹೆಸರುಗಳನ್ನು ತೆಗೆಸಿಲ್ಲ. ಇನ್ನು ಕೆಲವರು ಮಾಹಿತಿ ಗೊತ್ತಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.
ಇದಲ್ಲದೇ, ಕೆಲವರಿಗೆ ಬಿಪಿಎಲ್ ಕಾರ್ಡ್ ನಿಂದ ಹೆಸರು ತೆಗೆಸಲು ಸಾಧ್ಯವಾಗಲಿಲ್ಲ. ಅಂತವರಿಗೆ ಕಾಲಾವಕಾಶ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸರ್ಕಾರದ ನಿಯಮ ಉಲ್ಲಂಘಿಸಿ 21,232 ನೌಕರರು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಹಿನ್ನಲೆಯಲ್ಲಿ ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ಅಂತಹ ನೌಕರರಿಗೆ 40 ಸಾವಿರ ರೂ.ನಿಂದ 1.50 ಲಕ್ಷ ರೂ.ವರೆಗೆ ದಂಡ ಹಾಕಲಾಗಿದೆ. ಇದಲ್ಲದೇ ಸುಳ್ಳು ಮಾಹಿತಿ ನೀಡಿ ತೆರಿಗೆ ಪಾವತಿದಾರರು, ಶ್ರೀಮಂತರು ಕೂಡ ಕಾರ್ಡ್ ಪಡೆದುಕೊಂಡಿದ್ದು, ಅಂತಹವರ ಪತ್ತೆ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.