ಬಳ್ಳಾರಿ: ಸಂಡೂರು ತಾಲೂಕಿನಲ್ಲಿ ಅಂತ್ಯೋದಯ ಮತ್ತು ಬಿ.ಪಿ.ಎಲ್(ಆದ್ಯತಾ ಪಡಿತರಚೀಟಿ) ಪಡಿತರ ಚೀಟಿಗಳನ್ನು ಇಲಾಖೆ ಮಾನದಂಡಗಳ ಪ್ರಕಾರ ಮಾಹಿತಿ ನೀಡದೇ ಸುಳ್ಳು ಮಾಹಿತಿ ನೀಡಿ ಕೆಲವರು ಅಕ್ರಮವಾಗಿ ಬಿ.ಪಿ.ಎಲ್. ಪಡಿತರಚೀಟಿಯನ್ನು ಪಡೆದಿರುವುದು ಕಂಡುಬಂದಿದೆ.
ಅಂತವರು ಕೂಡಲೇ ಸ್ವಯಂಪ್ರೇರಿತವಾಗಿ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿಯನ್ನು ಏ.15 ರೊಳಗಾಗಿ ಹಿಂತಿರುಗಿಸಿ ಎ.ಪಿ.ಎಲ್.ಪಡಿತರ ಚೀಟಿಯನ್ನು ಪಡೆಯಬೇಕು ಎಂದು ಸಂಡೂರು ತಹಶೀಲ್ದಾರರು ತಿಳಿಸಿದ್ದಾರೆ.
ಕಾಯಂ ನೌಕರರು ಅಂದರೆ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು, ನಿಗಮಗಳು/ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು, ಆದಾಯ ತೆರಿಗೆ, ಸೇವಾತೆರಿಗೆ, ವ್ಯಾಟ್, ವೃತ್ತಿ ತೆರಿಗೆಯನ್ನು ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟರ್ ಗಿಂತ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವುದು, ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯವು 1,20,000 ರೂ.ಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಅರ್ಹರಲ್ಲ.
ಅದೇ ರೀತಿ ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ, ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕುಚಕ್ರ ವಾಹನವನ್ನು ಹೊಂದಿರುವುದು, ಒಂದೇ ಮನೆಯಲ್ಲಿ ವಾಸವಿದ್ದು, ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವುದು, ಕುಟುಂಬವು ಸದರಿ ವಿಳಾಸದಲ್ಲಿ ವಾಸವಿಲ್ಲದಿರುವುದು, ಮರಣ ಹೊಂದಿರುವ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಇರುವುದು/ಪಡಿತರ ಚೀಟಿಯನ್ನು ರದ್ದುಗೊಳಿಸದೇ ಇರುವವರು ಮಾನದಂಡಗಳನ್ನು ಮೀರಿ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ.
ಇಂತಹ ಪಡಿತರ ಚೀಟಿದಾರರು ಸ್ವಯಂಪ್ರೇರಿತವಾಗಿ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿಗಳನ್ನು ಹಿಂದಿರುಗಿಸಿ ಎ.ಪಿ.ಎಲ್.ಪಡಿತರ ಚೀಟಿಯನ್ನು ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ತಪ್ಪಿದ್ದಲ್ಲಿ ಸರ್ಕಾರದ ಆದೇಶದ ಅನುಸಾರ ಸಂಬಂದಪಟ್ಟವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಅನರ್ಹರು ಹೊಂದಿರುವ ಪಡಿತರ ಚೀಟಿಗಳನ್ನು ಸ್ವಯಂ ಪ್ರೇರಿತರಾಗಿ ಅಧ್ಯರ್ಪಣೆ ಮಾಡಲು ಮಾ.18 ರಂದು ಕೊನೆಯ ದಿನವಾಗಿತ್ತು, ಆದರೆ ಆಯುಕ್ತರ ಆದೇಶ ಮೇರೆಗೆ ಏ.15ರವರೆಗೆ ಮತ್ತೊಮ್ಮೆ ಕೊನೆಯ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಪಡಿತರ ಚೀಟಿಯನ್ನು ಸ್ವಯಂ ಪ್ರೇರಿತರಾಗಿ ವಾಪಸ್ ಮಾಡಿದರೆ ಅಂಥವರ ವಿರುದ್ದ ಯಾವುದೇ ಕ್ರಮ ಅಥವಾ ದಂಡ ವಸೂಲಿ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ವಿಶೇಷ ಸೂಚನೆ:
ತಪ್ಪು ಮಾಹಿತಿ ನೀಡಿ ಪಡಿತರ ಚೀಟಿಯನ್ನು ಪಡೆದುಕೊಂಡ ಫಲಾನುಭವಿಗಳ ಮಾಹಿತಿಯನ್ನು ಸೂಕ್ತ ದಾಖಲೆಯೊಂದಿಗೆ ಆಹಾರ ಶಾಖೆಯಲ್ಲಿ ನೀಡಬಹುದಾಗಿದ್ದು, ಇಂತಹ ದೂರುದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.