ಬೆಂಗಳೂರು: ನಿಯಮ ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಪಡೆದಿದ್ದ 13,87,639 ಬಿಪಿಎಲ್ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವ ಪ್ರಕ್ರಿಯೆ ಚುರುಕು ನೀಡಲಾಗಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮಕ್ಕೆ ವಿರುದ್ಧವಾಗಿ ಒಟ್ಟು 4036 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದನ್ನು ಪತ್ತೆ ಮಾಡಲಾಗಿದೆ. 2964 ಕುಟುಂಬಗಳ ಕಾರ್ಡ್ ಗಳನ್ನು ಈಗಾಗಲೇ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ರೇಷನ್ ಪಡೆಯದ 2.75 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಗಳು, ಆದಾಯ ತೆರಿಗೆ ಪಾವತಿಸುವ 98458 ಕುಟುಂಬಗಳು, ಆದಾಯ ಮಿತಿ ಜಾಸ್ತಿ ಇರುವ 10,09,479 ಕುಟುಂಬಗಳು ಸೇರಿ ಒಟ್ಟು 13.87 ಲಕ್ಷ ಕಾರ್ಡುಗಳನ್ನು ಅನರ್ಹ ಕಾರ್ಡುಗಳು ಎಂದು ಗುರುತಿಸಲಾಗಿದೆ. ಇವುಗಳಲ್ಲಿ 3.63 ಲಕ್ಷಕ್ಕೂ ಹೆಚ್ಚು ಕಾರ್ಡುಗಳನ್ನು ರದ್ದು ಮಾಡಲಾಗಿದೆ. 10.38 ಲಕ್ಷಕ್ಕೂ ಅಧಿಕ ಕಾರ್ಡುಗಳ ರದ್ದುಪಡಿಸುವ ಪ್ರಕ್ರಿಯೆ ನಡೆದಿದೆ. ಈ ಕ್ರಮದಿಂದಾಗಿ 18.70 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ನಿಂದ ಹೊರಗೆ ಹೋಗಲಿದ್ದಾರೆ ಎಂದು ತಿಳಿಸಿದ್ದಾರೆ.