ಬೆಂಗಳೂರು: ಐಷಾರಾಮಿ ಕಾರ್ ಹೊಂದಿದವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದ್ದು 12,584 ಕಾರ್ ಮಾಲೀಕರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ.
21,679 ಅಂತ್ಯೋದಯ, 3,08,345 ಬಿಪಿಎಲ್ ಪಡಿತರ ಚೀಟಿ ಸೇರಿದಂತೆ ಸುಮಾರು 3.30 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದ್ದು, ಕೆಲವು ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾಯಿಸಿ ಕೊಡಲಾಗಿದೆ. ರಾಜ್ಯದಲ್ಲಿ ಕಾರ್ ಹೊಂದಿದವರು ಕೂಡ ಪಡಿತರ ಚೀಟಿ ಪಡೆದುಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಸಾರಿಗೆ ಇಲಾಖೆಯ ಸಹಕಾರ ಪಡೆದುಕೊಂಡಿದ್ದಾರೆ.
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರು ಕಾರ್ ಖರೀದಿಸಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, 12.584 ಕುಟುಂಬಗಳು ಕಾರ್ ಗಳನ್ನು ಹೊಂದಿದ್ದರೂ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಪಡೆದಿರುವುದು ಪತ್ತೆಯಾಗಿದೆ. ಅಂತಹ ಕಾಡುಗಳನ್ನು ರದ್ದು ಮಾಡಲಾಗಿದೆ. ಈ 12,584 ಕುಟುಂಬಗಳು ಸೇರಿದಂತೆ ಸುಮಾರು 3.30 ಲಕ್ಷ ಕುಟುಂಬಗಳ ಬಿಪಿಎಲ್, ಅಂತ್ಯೋದಯ ಪಡಿತರ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದುಪಡಿಸಿದೆ ಎಂದು ಹೇಳಲಾಗಿದೆ.