ಬೆಂಗಳೂರು: ಬಿಪಿಎಲ್ ಪಡಿತರ ಚೀಟಿ ಕೋರಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಮುಂದಿನ ವಾರದಿಂದ ಅವಕಾಶ ಕಲ್ಪಿಸಲು ಆಹಾರ ಇಲಾಖೆ ತೀರ್ಮಾನಿಸಿದೆ.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ವಿತರಣೆ ಸ್ಥಗಿತಗೊಳಿಸಲಾಗಿತ್ತು. ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ವಿಭಾಗವನ್ನು ಲಾಕ್ ಮಾಡಲಾಗಿತ್ತು. ಮುಂದಿನ ವಾರದಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲು ತೆರೆಯಲಾಗುವುದು. ಬಿಪಿಎಲ್ ಕಾರ್ಡ್ ಗಾಗಿ ಚುನಾವಣೆಗಿಂತ ಮೊದಲು 2.94 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳ ಪರಿಶೀಲನೆ ನಡೆಸಲಾಗುತ್ತಿದೆ.
ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಗ್ರಾಪಂ ಕಚೇರಿಗಳಲ್ಲಿ ಲಭ್ಯವಿರುವ ಗಣಕೀಕರಣ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬೇಕು.
ಹೊಸದಾಗಿ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಮನೆಯ ಯಜಮಾನಿಯ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೆ ಆಧಾರ್ ನೊಂದಿಗೆ ಆದಾಯ ಪ್ರಮಾಣ ಪತ್ರ ನೀಡಬೇಕಿದ್ದು, ಆರು ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ವೆಬ್ಸೈಟ್ನಲ್ಲಿ ಸ್ವಯಂ ಆಗಿ ಅರ್ಜಿ ಸಲ್ಲಿಸಬಹುದು. ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದೆ.
ಮುಂದಿನ ವಾರ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಆನ್ಲೈನ್ ಸೇವೆ ಪುನಾರಂಭಿಸಲಾಗುವುದು. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗುವುದು. http://ahara.kar.nic.in ವೆಬ್ಸೈಟ್ ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.