ಮಡಿಕೇರಿ: ಹೊಸ ಬಿಪಿಎಲ್ ಪಡಿತರ ಚೀಟಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಇನ್ನಷ್ಟು ಮಾಹಿತಿ ನೀಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗೆ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಸೂಚಿಸಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಗುರುವಾರ ನಡೆದ 2020-21 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಷ್ಟೋ ಕುಟುಂಬಗಳು ಇನ್ನೂ ಸಹ ಪಡಿತರ ಚೀಟಿ ಪಡೆದುಕೊಂಡಿಲ್ಲ. ಆದ್ದರಿಂದ ಬಿಪಿಎಲ್ ಪಡಿತರ ಚೀಟಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಜಿ.ಪಂ. ಅಧ್ಯಕ್ಷರು ಸ್ಪಷ್ಟ ನಿರ್ದೇಶನ ನೀಡಿದರು.
ಬಿಪಿಎಲ್ ಕುಟುಂಬಗಳಿಗೆ ಎಪಿಎಲ್ ಕಾರ್ಡ್ ದೊರೆತಿದ್ದು, ಈ ಬಗ್ಗೆ ಪರಿಶೀಲಿಸಿ ಬಿಪಿಎಲ್ ಕಾರ್ಡ್ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು ಎಂದು ಸೂಚಿಸಿದರು.
ಈ ಕುರಿತು ಮಾಹಿತಿ ನೀಡಿದ ಆಹಾರ ಇಲಾಖೆ ಶಿರಸ್ತೆದಾರರು ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಹೊಸ ಪಡಿತರ ಚೀಟಿ ವಿತರಣೆಗೆ ಸರ್ಕಾರ ಅನುಮತಿ ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್ ಅವರು ಜಿಲ್ಲೆಯಲ್ಲಿ ಹೆಚ್ಚಿನ ಭೂಮಿ ಹಾಗೂ ಕಾರು ಹೊಂದಿರುವ ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ಒದಗಿಸಲಾಗಿದೆ. ಆದರೆ ಕಡುಬಡವರಿಗೆ ಎಪಿಎಲ್ ಕಾರ್ಡ್ ನೀಡಲಾಗಿದೆ. ಇದನ್ನು ಪರಿಶೀಲಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ವಾರು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಪಡೆದಿರುವ ಕುಟುಂಬಗಳ ಮಾಹಿತಿಯನ್ನು ಎಲ್ಲಾ ಸದಸ್ಯರಿಗೆ ತಲುಪಿಸುವಂತೆ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ಭವ್ಯ ಅವರು ಮಾತನಾಡಿ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಸಹ ಎಪಿಎಲ್ ಕಾರ್ಡ್ ನೀಡಲಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಯಾವ ಯಾವ ಕುಟುಂಬಗಳು ಎಷ್ಟು ಆರ್ಥಿಕ ವ್ಯವಸ್ಥೆಯನ್ನು ಹೊಂದಿವೆ ಎಂಬ ಬಗ್ಗೆ ಆಧಾರ್ ಜೋಡಣೆಯಾಗಿದ್ದು, ಈ ಮೂಲಕ ಮಾಹಿತಿ ಪಡೆಯಬಹುದಾಗಿದೆ. ದೊಡ್ಡವರು ಬಿಪಿಎಲ್ ಪಡಿತರ ಚೀಟಿ ಪಡೆದು ಆಹಾರವನ್ನು ತಮ್ಮ ಮನೆಯಲ್ಲಿ ಕೆಲಸ ಮಾಡುವ ಬಡವರಿಗೆ ವಿತರಿಸಿ ಲೆಕ್ಕ ಬರೆದುಕೊಳ್ಳುತ್ತಾರೆ. ನಿಜವಾದ ಕಡುಬಡವರಿಗೆ ಸರ್ಕಾರದ ಪಡಿತರ ದೊರೆಯುತ್ತಿಲ್ಲ ಎಂದು ಭವ್ಯ ಅವರು ನೋವು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಆಹಾರ ಇಲಾಖೆಯ ಶಿರಸ್ತೆದಾರರು ಬಿಪಿಎಲ್ ಕುಟುಂಬದವರಿಗೆ ಒಬ್ಬ ಸದಸ್ಯರಿಗೆ 5 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತದೆ. ಅಂತ್ಯೋದಯ ಅನ್ನಭಾಗ್ಯ ಯೋಜನೆಯಡಿ ಒಂದು ಪಡಿತರ ಚೀಟಿಗೆ 35 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ಬಿಪಿಎಲ್ ಕಾರ್ಡ್ ಒಂದಕ್ಕೆ 2 ಕೆ.ಜಿ. ಗೋಧಿಯನ್ನು ವಿತರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಎಪಿಎಲ್ ಕಾರ್ಡ್‍ನ ಒಬ್ಬರಿಗೆ 5 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಇದ್ದರೂ ಸಹ 10 ಕೆ.ಜಿ. ಅಕ್ಕಿಯನ್ನು ಮಾತ್ರ ನೀಡಲಾಗುತ್ತದೆ ಎಂದು ಅವರು ಹೇಳಿದರು.