
ಶಿವಮೊಗ್ಗ: ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಹಾಕಿರುವವರಿಗೆ ಕೂಡಲೇ ಕಾರ್ಡ್ ನೀಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಠಿ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2,55,361 ಬಡವರು ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಹಾಕಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಸಹಜ ಸ್ಥಿತಿಗೆ ಬಂದಿರುವುದರಿಂದ ಆಹಾರ ಸಚಿವರು ಈ ಬಗ್ಗೆ ಗಮನಹರಿಸಿ ಯಾರು ಅರ್ಹರೋ ಅವರಿಗೆ ಮಾತ್ರ ಬಿಪಿಎಲ್ ಕಾರ್ಡ್ ನೀಡಲಿ ಎಂದರು.
ರಾಜ್ಯದಲ್ಲಿ 2019 ಏಪ್ರಿಲ್ ನಿಂದ ಕಾರ್ಡ್ ವಿತರಿಸಿರುವುದನ್ನು ರಾಜ್ಯಸರ್ಕಾರ ನಿಲ್ಲಿಸಿದೆ. ಇದರಿಂದ ಬಡವರಿಗೆ ತುಂಬಾ ತೊಂದರೆಯಾಗುತ್ತಿದೆ. ಆರೋಗ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ ಬೇಕೇ ಬೇಕು. ವಿವಿಧ ಪಿಂಚಣಿ ಪಡೆಯಲು ಕೂಡ ಬಿಪಿಎಲ್ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ, ಸರ್ಕಾರ ಕೂಡಲೇ ಹೊಸದಾಗಿ ಅರ್ಜಿ ಸಲ್ಲಿಸಿರುವವರಿಗೆ ಬಿಪಿಎಲ್ ಕಾರ್ಡ್ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಪ್ರಮುಖರಾದ ಹೊಳೆ ಮಡಿಲು ವೆಂಕಟೇಶ್, ಎಸ್.ವಿ.ರಾಜಮ್ಮ, ಹೆಚ್.ಎಂ.ಸಂಗಯ್ಯ, ಶಂಕರನಾಯಕ್, ಗೋಪಾಲಕೃಷ್ಣ ಇದ್ದರು.