
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡೆಯುತ್ತಿರುವ ಅಕ್ಕಿಗೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ. ಪ್ರತಿ ಕೆಜಿಗೆ ಎರಡರಿಂದ ಮೂರು ರೂಪಾಯಿ ದರ ನಿಗದಿ ಮಾಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಅಕ್ಕಿ ಮತ್ತು ಗೋಧಿ ವಿತರಿಸುತ್ತಿದ್ದು, ಇನ್ನು ಮುಂದೆ ಕೆಜಿಗೆ ಎರಡರಿಂದ ಮೂರು ರೂಪಾಯಿ ದರ ನಿಗದಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ತಜ್ಞರು ಹೀಗೊಂದು ಸಲಹೆ ನೀಡಿದ್ದಾರೆ. ಅಕ್ಕಿಗೆ ಕೆಜಿಗೆ ಮೂರು ರೂಪಾಯಿ ದರ ನಿಗದಿ ಪಡಿಸಿದರೆ ತಿಂಗಳಿಗೆ 58 ಕೋಟಿ ರೂಪಾಯಿ ಆದಾಯ ಬರುತ್ತದೆ. ಈ ಆದಾಯದಲ್ಲಿ ಪೋಷಕಾಂಶ ಸಹಿತ ಇನ್ನಿತರ ವಸ್ತುಗಳನ್ನು ನೀಡಬಹುದು. ಅಲ್ಲದೇ, ಕಾಳಸಂತೆಯಲ್ಲಿ ಅಕ್ಕಿ ಮಾರಾಟ ತಡೆಯಬಹುದು ಎಂದು ಸಲಹೆ ನೀಡಲಾಗಿದೆ. ಆದರೆ ಸರ್ಕಾರ ಈ ಸಲಹೆ ಕುರಿತಾಗಿ ಇನ್ನೂ ಚರ್ಚೆ ನಡೆಸಿಲ್ಲ ಎಂದು ಹೇಳಲಾಗಿದೆ.
ರಾಜ್ಯದಲ್ಲಿ 1.95 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪ್ರತಿತಿಂಗಳು ಉಚಿತವಾಗಿ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 30 ರೂಪಾಯಿಯಂತೆ ಖರೀದಿಸಿ ಪ್ರತಿತಿಂಗಳು ರಾಜ್ಯಕ್ಕೆ ಮೂರು ರೂಪಾಯಿ ದರದಲ್ಲಿ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುತ್ತದೆ. ಖರೀದಿ, ಸಾಗಾಣಿಕೆ, ಹಮಾಲಿ ವೆಚ್ಚ ಸೇರಿದಂತೆ ರಾಜ್ಯ ಸರ್ಕಾರ ಪ್ರತಿ ತಿಂಗಳು ಸುಮಾರು 159 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎನ್ನಲಾಗಿದೆ.