ಸಾಮಾನ್ಯವಾಗಿ ಪೊಲೀಸ್ ಠಾಣೆಗಳೆಂದರೆ ಬಹುತೇಕ ಜನರಿಗೆ ಒಂದು ರೀತಿಯ ಭಯ ಮತ್ತು ಅಳುಕು ಇರುತ್ತದೆ. ಪೊಲೀಸ್ ಠಾಣೆಗಳು ಅತ್ಯಂತ ಅಪರೂಪಕ್ಕೆಂಬಂತೆ ಮನೋರಂಜನಾ ತಾಣಗಳಾಗುತ್ತವೆ.
ಇಂತಹದ್ದೊಂದು ಅಪರೂಪಗಳಲ್ಲಿ ಅಪರೂಪವೆನಿಸುವ ಘಟನೆಗೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ನಟ್ಟುಕಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.
ಯಾದವ್ ಎಂಬ ಬಾಲಕ ಪೊಲೀಸ್ ಠಾಣೆಗೆ ತೆರಳಿ ಮಲಯಾಳಂನ ಜಾನಪದ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಠಾಣೆಯಲ್ಲಿದ್ದ ಪೊಲೀಸರನ್ನ ರಂಜಿಸಿದ್ದಾನೆ.
ಆ ಬಾಲಕ ಹಾಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಸಾಕಷ್ಟು ವೈರಲ್ ಆಗಿದೆ ಮತ್ತು ನೆಟ್ಟಿಗರು ಬಾಲಕನಿಗೆ ಶಹಬ್ಬಾಸ್ ಹೇಳುತ್ತಿದ್ದಾರೆ.
ಈ ಚಿಕ್ಕ ವಿಡಿಯೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಹಾಡನ್ನು ಆರಂಭಿಸಲು ಬಾಲಕನಿಗೆ 1, 2, 3 ಎಂದು ಹೇಳುತ್ತಿದ್ದಂತೆಯೇ ಬಾಲಕ ಹಾಡನ್ನು ಹಾಡಲು ಆರಂಭಿಸುತ್ತಾನೆ. ತಾನು ಕುಳಿತ ಕುರ್ಚಿಯನ್ನೇ ಬಾರಿಸುತ್ತಾ ಸುಶ್ರಾವ್ಯವಾಗಿ ಹಾಡುವ ಮೂಲಕ ಬಾಲಕ ಪೊಲೀಸ್ ಸಿಬ್ಬಂದಿಯನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಾನೆ.