ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆಗೆ ಇಂದು ಬೌರಿಂಗ್ ಆಸ್ಪತ್ರೆಗೆ ಎಸ್ಐಟಿ ಕರೆದೊಯ್ಯಲಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಹಾಗೂ ಆಸ್ಪತ್ರೆ ಸುತ್ತಮುತ್ತ ಪೊಲೀಸ್ ಭ್ಯದ್ರತೆ ಕೈಗೊಳ್ಳಲಾಗಿದೆ. ಇದರಿಂದಾಗಿ ಇತರ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯ ತುರ್ತುನಿಗಾ ಘಟಕದ ಬಳಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಇದರಿಂದ ರೋಗಿಗಳು ತೊಂದರೆಗೀಡಾಗಿದ್ದಾರೆ. ಎಮರ್ಜೆನ್ಸಿ ಎಂದು ಪೀಣ್ಯಾದಿಂದ ಆಟೋದಲ್ಲಿ ಬಂದ ರೋಗಿಯೊಬ್ಬರನ್ನು ಆಸ್ಪತ್ರೆಯ ಗೇಟ್ ಬಳಿಯೇ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ.
ಆಸ್ಪತ್ರೆಯ ಗೇಟ್ ಬಳಿಯೇ ವಾಹನ ನಿಲ್ಲಿಸಬೇಕು. ಇಲ್ಲಿಂದ ಮುಂದೆ ವಾಹನ ಬಿಡುವುದಿಲ್ಲ ಎಂದು ಸೆಕ್ಯುರಿಟಿ ಹೇಳಿದ್ದಾರೆ. ರೋಗಿ ತನಗೆ ಹೊಟ್ಟೆನೋವಿದ್ದು ನಡೆದಾಡಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದಾನೆ. ಆದರೂ ಆಟೋವನ್ನು ಒಳಗೆ ಬಿಟ್ಟಿಲ್ಲ.
ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ವೃದ್ಧೆಯೊಬ್ಬರು ಆಸ್ಪತ್ರೆ ಬಳಿ ಬಂದಿದ್ದಾರೆ. ಅವರನ್ನು ತಡೆದ ಭದ್ರತಾ ಸಿಬ್ಬಂದಿ ವಾಪಾಸ್ ಕಳುಹಿಸಿದ್ದಾರೆ. ಇದರಿಂದಾಗಿ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಇತರ ರೋಗಿಗಳಿಗಾಗಿ ಬೇರೆ ವ್ಯವಸ್ಥೆ ಮಡುವಂತೆ ಆಗ್ರಹಿಸಿದ್ದಾರೆ.