ಮನೆಯಲ್ಲಿ ಮೊಬೈಲ್ ಫೋನ್ ಚಾರ್ಜಿಂಗ್ ಮಾಡಿಲ್ಲ ಅಂತಾ ಕಚೇರಿಯಲ್ಲಿ ಮಾಡುತ್ತಿದ್ದೀರಾ..? ಇನ್ಮುಂದೆ ಆಫೀಸ್ ನಲ್ಲಿ ಫೋನ್ ಚಾರ್ಜ್ ಮಾಡುವ ಮುನ್ನ ಹುಷಾರ್..! ಯಾಕಂದ್ರೆ ಕಚೇರಿಯಲ್ಲಿ ವಿದ್ಯುತ್ ಕಳ್ಳತನ ಮಾಡಿದ್ದಕ್ಕಾಗಿ ಮೇಲಾಧಿಕಾರಿಯೊಬ್ಬರು ತಮ್ಮ ಉದ್ಯೋಗಿಗಳ ಮೇಲೆ ಸಿಟ್ಟಾಗಿದ್ದಾರೆ. ವಿದ್ಯುತ್ ಕಳ್ಳತನ ಮಾಡುವುದನ್ನು ನಿಲ್ಲಿಸದಿದ್ದರೆ ಅವರ ವೇತನದಲ್ಲಿ ಕಡಿತ ಮಾಡಲಾಗುವುದು ಎಂದು ಗರಂ ಆಗಿದ್ದಾರೆ.
ಹೌದು, ಆಫಿಸ್ ನಲ್ಲಿ ಫೋನ್ ಚಾರ್ಜ್ ಮಾಡುವುದು ಅಂದ್ರೆ ಅದು ವಿದ್ಯುತ್ ಕಳ್ಳತನ ಎನ್ನುವುದು ಇಲ್ಲೊಬ್ಬರು ಬಾಸ್ ನ ಆರೋಪವಾಗಿದೆ. ಹೀಗಾಗಿ ತಮ್ಮ ಕಚೇರಿಯಲ್ಲಿ ಫೋನ್ ಮತ್ತು ಇತರ ವಿದ್ಯುತ್ ಸಾಧನಗಳನ್ನು ಚಾರ್ಜ್ ಮಾಡದಂತೆ ಅವರು ತಮ್ಮ ಉದ್ಯೋಗಿಗಳಿಗೆ ತಾಕೀತು ಮಾಡಿದ್ದಾರೆ.
ಈ ಸಂಬಂಧ ಬಾಸ್ ಸುತ್ತೋಲೆಯನ್ನು ಹೊರಡಿಸಿದ್ದು, ಆವರಣದಲ್ಲಿ ಯಾವುದೇ ಮೊಬೈಲ್ ಫೋನ್ ಅಥವಾ ಇತರ ಎಲೆಕ್ಟ್ರಿಕಲ್ ಸಾಧನಗಳನ್ನು ಚಾರ್ಜ್ ಮಾಡಲು ಯಾರಿಗೂ ಅರ್ಹತೆ ಇಲ್ಲ. ಇದು ವಿದ್ಯುತ್ ಕಳ್ಳತನವಾಗಿದೆ. ಹೀಗಾಗಿ ನಿಮ್ಮ ವೇತನದಿಂದ ಕಡಿತಗೊಳಿಸಲಾಗುತ್ತದೆ. ನಿಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಬೇಕು ಅಂತಾ ಆದೇಶಿಸಿದ್ದಾರೆ.
ಬಾಸ್ ಹೊರಡಿಸಿರುವ ಆದೇಶದ ಪ್ರತಿಯನ್ನು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮೂರು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ ಪೋಸ್ಟ್ ಆಗಿದ್ದ ಇದು, ಈಗ ಮತ್ತೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ಅಷ್ಟೇ ಅಲ್ಲ, ಬಾಸ್ ತಮ್ಮ ಕಚೇರಿಯ ಗಡಿಯಾರದ ಮುಳ್ಳನ್ನು ದಿನಕ್ಕೆ 10-15 ನಿಮಿಷಗಳಷ್ಟು ಮುಂದಕ್ಕೆ ತಳ್ಳಿದ್ದಾರಂತೆ. ಪ್ರತಿದಿನ ಬೆಳಿಗ್ಗೆ 6:45ಕ್ಕೆ ಸೈನ್ ಇನ್ ಮಾಡಿದರೂ, ಬಾಸ್ ತನ್ನ ಗಡಿಯಾರದ ಸಮಯವನ್ನು 7 ಗಂಟೆಗೆ ತಳ್ಳುವುದನ್ನು ಉದ್ಯೋಗಿ ಗಮನಿಸಿದ್ದಾರೆ. ಹೀಗಾಗಿ 7 ಗಂಟೆಗೆ ಸೈನ್ ಇನ್ ಮಾಡಲು ಪ್ರಾರಂಭಿಸಿದಾಗ, ಬಾಸ್ ಪ್ರತೀಕಾರವಾಗಿ ತನ್ನ ಗಡಿಯಾರದ ಸಮಯವನ್ನು 7:10 ಕ್ಕೆ ಬದಲಾಯಿಸಿದ್ದಾಗಿ ಉದ್ಯೋಗಿ ಆರೋಪಿಸಿದ್ದಾರೆ.