ಚಿತ್ರದುರ್ಗ: ಲೇವಾದೇವಿ ಗಿರವಿ ಹಾಗೂ ಹಣಕಾಸು ಸಂಸ್ಥೆಗಳು ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961ರ ಪ್ರಕರಣ 28ರಡಿ ಸರ್ಕಾರವು ಬಡ್ಡಿದರ ನಿಗದಿಪಡಿಸಿದೆ.
ಸರ್ಕಾರವು ಬಡ್ಡಿದರ ನಿಗದಿಪಡಿಸಿರುವ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲೈಸೆನ್ಸ್ ಪಡೆದ ಲೇವಾದೇವಿ ಹಾಗೂ ಗಿರವಿದಾರರ ಅಂಗಡಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಗೆ ಸುಲಭವಾಗಿ ಕಾಣುವಂತೆ ಬಡ್ಡಿದರ ವಿಧಿಸುವ ನಾಮಫಲಕಗಳನ್ನು ನಗದು ಕೌಂಟರ್ ಹತ್ತಿರ ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ಪ್ರದರ್ಶಿಸಬೇಕು.
ಭದ್ರತೆ ಇರುವ ಸಾಲಗಳಿಗೆ ಗರಿಷ್ಟ ವಾರ್ಷಿಕ ಶೇ.14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ಗರಿಷ್ಟ ವಾರ್ಷಿಕ ಶೇ.16 ಮಾತ್ರ ವಿಧಿಸಬೇಕಾಗಿರುತ್ತದೆ. ಈ ದರಗಳಿಗಿಂತ ಮಿತಿ ಮೀರಿದ ಬಡ್ಡಿ ವಿಧಿಸಿ ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಗಿರವಿ ಲೇವಾದೇವಿ ಸಹಾಯಕ ನಿಬಂಧಕರು, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ ಮತ್ತು ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಗಿರವಿ ಲೇವಾದೇವಿ ಉಪ ನಿಬಂಧಕರು, ಚಿತ್ರದುರ್ಗ ಇವರಿಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.