ಲಂಡನ್: ಯಾರಾದರೂ ಬೇಸರಗೊಂಡಾಗ ಹೊಸದನ್ನು ಕಲಿಯಲು ಬಯಸುತ್ತಾರೆ. ಇಲ್ಲಾ ಯಾರೂ ಮಾಡದ್ದನ್ನು ಏನಾದರೂ ಸಾಧಿಸಲು ಬಯಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾಡಿದ್ದೇನು ಗೊತ್ತಾ? ವಿಶ್ವದ ಅತ್ಯಂತ ಅಪಾಯಕಾರಿ ಗಿಡವನ್ನು ಬೆಳೆಸಿದ್ದಾನೆ!
ಇಂಗ್ಲೆಂಡ್ನ ಡೇನಿಯಲ್ ಎಮ್ಲಿನ್-ಜೋನ್ಸ್ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದ್ದಾನೆ. ಅಪಾಯಕಾರಿ ಗಿಡವೊಂದನ್ನು ಆತ ಬೆಳೆಸಿದ್ದಾನೆ. ಇದು ಎಷ್ಟು ಅಪಾಯಕಾರಿ ಎಂದರೆ ಒಮ್ಮೆ ಮೈಗೆ ಸೋಕಿದರೆ ಅದರ ಉರಿಯನ್ನು ತಡೆದುಕೊಳ್ಳಲು ಆಗದೇ ಮನುಷ್ಯ ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದಂತೆ !
Dendrocnide Moroides ಎಂದು ಕರೆಯಲ್ಪಡುವ ಇದು ಆಸ್ಟ್ರೇಲಿಯಾ ಮತ್ತು ಮಲೇಷ್ಯಾದಲ್ಲಿ ಕಂಡುಬರುವ ಸ್ಥಳೀಯ ಸಸ್ಯವಾಗಿದೆ. ‘ಜಿಂಪಿ-ಜಿಂಪಿ’ ಅಥವಾ ‘ಆತ್ಮಹತ್ಯೆ ಸಸ್ಯ’ ಎಂದೂ ಇದನ್ನು ಕರೆಯುತ್ತಾರೆ. ಒಮ್ಮೆ ಇದರ ಎಲೆ ಸೋಕಿದರೆ ಆ ವ್ಯಕ್ತಿಯ ಚರ್ಮದಿಂದ ಕೂದಲನ್ನು ತೆಗೆಯಲೇಬೇಕು. ಇಲ್ಲದಿದ್ದರೆ ಇದು ಜೀವನಪೂರ್ತಿ ಹಿಂಸೆ ನೀಡುತ್ತದೆ. ಇಂಥದ್ದೊಂದು ಭಯಾನಕ ಕೆಲಸ ಮಾಡಿದ್ದಾನೆ. ಡೇನಿಯಲ್.
ಈ ಗಿಡವನ್ನು ಬೆಳೆಸಿರುವ ಬಗ್ಗೆ ಹೇಳಿಕೊಂಡಿರುವ ಆತ ನನಗೆ ತುಂಬಾ ಬೋರ್ ಆಗಿ ಹೊಸದನ್ನು ಮಾಡಬೇಕು ಎಂದುಕೊಂಡೆ. ನಂತರ ಇಂಟರ್ನೆಟ್ ಹುಡುಕಿದಾಗ ಈ ಗಿಡದ ಬೀಜ ಲಭ್ಯ ಇರುವುದು ತಿಳಿಯಿತು. ಆಸ್ಟ್ರೇಲಿಯಾದಿಂದ 60 ಡಾಲರ್ ಖರೀದಿಸಿ ಇದನ್ನು ತಂದು ಮುಂಭಾಗದ ಕೋಣೆಯಲ್ಲಿ ಪಾಟ್ನಲ್ಲಿ ಬೆಳೆಸುತ್ತಿದ್ದೇನೆ. ಇದು ನೋವಿನ ಗಿಡವಾದರೂ ಕೆಲವೊಂದು ಔಷಧಗಳಲ್ಲಿ ಬಳಕೆಯಾಗುತ್ತದೆ. ಅದಕ್ಕೇ ಇದನ್ನು ನೆಟ್ಟಿದ್ದೇನೆ ಎಂದಿದ್ದಾನೆ. ಒಟ್ಟಿನಲ್ಲಿ ನೆಟ್ಟಿಗರು ಮಾತ್ರ ಈ ವಿಚಿತ್ರ ಹವ್ಯಾಸಕ್ಕೆ ಬೆಕ್ಕಸಬೆರಗಾಗುತ್ತಿದ್ದಾರೆ.