ನಾನು ನಾಪತ್ತೆಯಾಗಿದ್ದೇನೆಂದು ತನ್ನ ಬಗ್ಗೆ ತಾನೇ ವಾಟೆಂಡ್ ಪೋಸ್ಟ್ ಹಾಕಿಕೊಂಡ ವ್ಯಕ್ತಿಯನ್ನ ಚೀನಾದಲ್ಲಿ ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಗ್ಗೆ ನಕಲಿ ಬಂಧನ ವಾರಂಟ್ ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ನವೆಂಬರ್ 11 ರಂದು, ವಾಂಗ್ ಎಂಬ ಉಪನಾಮದಿಂದ ಗುರುತಿಸಲ್ಪಟ್ಟ ವ್ಯಕ್ತಿ ತನ್ನ ಫೋಟೋವನ್ನು ಒಳಗೊಂಡಿರುವ ನಾಟಕೀಯ “ವಾಂಟೆಡ್ ಆರ್ಡರ್” ಅನ್ನು ಪೋಸ್ಟ್ ಮಾಡಿದ್ದ. ಚೀನಾದ ಪ್ರಸಿದ್ಧ ನಟ ಮತ್ತು ನೃತ್ಯಗಾರ ವಾಂಗ್ ಯಿಬೋ ಎಂದು ಹೇಳಿಕೊಳ್ಳುತ್ತಾ, ಅವನು ತನ್ನನ್ನು ತಾನು ಪಲಾಯನವಾದಿ ಎಂದು ಘೋಷಿಸಿಕೊಂಡಿದ್ದ.
ವಿಲಕ್ಷಣ ಪೋಸ್ಟ್ ನಲ್ಲಿ “ನಾನು ಶಾಂಕ್ಸಿ ಪ್ರಾಂತ್ಯದ ಚಾಂಗ್ಜಿ ನಗರದ ಕಿನ್ಯುವಾನ್ ಕೌಂಟಿಯ ಸ್ಥಳೀಯ. ನಾನು ನವೆಂಬರ್ 10, 2024 ರಂದು ಕಂಪನಿಯಿಂದ 30 ಮಿಲಿಯನ್ ಯುವಾನ್ (US$4 ಮಿಲಿಯನ್) ಸುಲಿಗೆ ಮಾಡಿದೆ. ನಾನು ಸಬ್‌ಮಷಿನ್ ಗನ್ ಮತ್ತು 500 ಬುಲೆಟ್‌ಗಳನ್ನು ಹೊಂದಿದ್ದೇನೆ. ನೀವು ನನ್ನನ್ನು ಹುಡುಕಿದರೆ, ನಿಮಗೆ 30,000 ಯುವಾನ್ (3.51 ಲಕ್ಷ ರೂ.) ಬಹುಮಾನ ನೀಡಲಾಗುವುದು” ಎಂದು ಪೋಸ್ಟ್ ಮಾಡಿದ್ದ.
ಪೋಸ್ಟ್ ತಕ್ಷಣವೇ ವೈರಲ್ ಆಗಿದ್ದು ಇಂಟರ್ನೆಟ್ ಬಳಕೆದಾರರನ್ನಷ್ಟೇ ಅಲ್ಲದೇ, ಕ್ವಿನ್ಯುವಾನ್ ಕೌಂಟಿಯ ಸ್ಥಳೀಯ ಪೊಲೀಸರು ಅಲರ್ಟ್ ಆಗಿ ನವೆಂಬರ್ 12 ರಂದು ತನಿಖೆಯನ್ನು ಪ್ರಾರಂಭಿಸಿ ವಾಂಗ್ ನನ್ನು ಬಂಧಿಸಿದರು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ವಿಚಾರಣೆ ನಂತರ ವಾಂಗ್ ಯಾವುದೇ ಬಂದೂಕುಗಳನ್ನು ಹೊಂದಿಲ್ಲ ಅಥವಾ ಸುಲಿಗೆ ಮಾಡಿಲ್ಲ ಎಂದು ಪೊಲೀಸರು ದೃಢಪಡಿಸಿದರು. ಬದಲಾಗಿ ಸಂಪೂರ್ಣ ಕಥೆಯು ಭ್ರಮೆ ಮತ್ತು ಬೇಸರದ ಭಾವನೆಗಳಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ಆರೋಪಿ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ. ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಅಧಿಕಾರಿಗಳು ಅವನ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಮೂಲಕ ಪೊಲೀಸರು, “ಇಂಟರ್ನೆಟ್ ಕಾನೂನಿನ ವ್ಯಾಪ್ತಿಯನ್ನು ಮೀರಿಲ್ಲ ಎಂದು ನಾಗರಿಕರಿಗೆ ನೆನಪಿಸಿದರು. ಕಥೆಯನ್ನು ಹೆಣೆಯುವುದು ಮತ್ತು ಅದನ್ನು ಹರಡುವುದು ಎರಡೂ ಅಪರಾಧ ಕೃತ್ಯಗಳು. ವದಂತಿಗಳನ್ನು ಹುಟ್ಟುಹಾಕುವ ಅಥವಾ ಪ್ರಸಾರ ಮಾಡುವ ಯಾರಾದರೂ ನ್ಯಾಯಾಂಗ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.