ನವದೆಹಲಿ: ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಿಂದ ‘ಮೋದಿ ಕಾ ಪರಿವಾರ್’ ತೆಗೆದುಹಾಕುವಂತೆ ತಮ್ಮ ಬೆಂಬಲಿಗರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ‘ಮೋದಿ ಕಾ ಪರಿವಾರ್’ ಎಂದು ಸೇರಿಸುವ ಮೂಲಕ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಎಕ್ಸ್ ನಲ್ಲಿನ ತಮ್ಮ ಪೋಸ್ಟ್ ನಲ್ಲಿ ಪ್ರಧಾನಿ ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ಮೂಲಕ, ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಗುರುತಾಗಿ ‘ಮೋದಿ ಕಾ ಪರಿವಾರ್’ ಅನ್ನು ತಮ್ಮ ಸಾಮಾಜಿಕ ಮಾಧ್ಯಮಕ್ಕೆ ಸೇರಿಸಿದ್ದಾರೆ. ಅದರಿಂದ ನಾನು ಸಾಕಷ್ಟು ಶಕ್ತಿಯನ್ನು ಪಡೆದುಕೊಂಡಿದ್ದೇನೆ. ಭಾರತದ ಜನರು ಸತತ ಮೂರನೇ ಬಾರಿಗೆ NDA ಗೆ ಬಹುಮತ ನೀಡಿದ್ದಾರೆ. ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಆದೇಶವನ್ನು ನೀಡಿದ್ದಾರೆ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.
“ನಮ್ಮೆಲ್ಲರನ್ನೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಲಾಗಿದೆ, ನಾನು ಮತ್ತೊಮ್ಮೆ ಭಾರತದ ಜನರಿಗೆ ಧನ್ಯವಾದ ಹೇಳುತ್ತೇನೆ. ಈಗ ನಿಮ್ಮ ಸಾಮಾಜಿಕ ಮಾಧ್ಯಮಗಳಿಂದ ‘ಮೋದಿ ಕಾ ಪರಿವಾರ್’ ಅನ್ನು ತೆಗೆದುಹಾಕುವಂತೆ ವಿನಂತಿಸುತ್ತೇನೆ. ಹೆಸರು ಬದಲಾಗಬಹುದು, ಆದರೆ ಭಾರತದ ಪ್ರಗತಿಗಾಗಿ ಶ್ರಮಿಸುತ್ತಿರುವ ಒಂದು ಪರಿವಾರವಾಗಿ ನಮ್ಮ ಬಾಂಧವ್ಯವು ಗಟ್ಟಿಯಾಗಿ ಉಳಿದಿದೆ ಎಂದು ತಿಳಿಸಿದ್ದಾರೆ.
ಸ್ವಜನಪಕ್ಷಪಾತ/ವಂಶಾಡಳಿತ ರಾಜಕೀಯ ಎಂದು ಆರೋಪಿಸಿದ್ದ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮೋದಿಗೆ “ಕುಟುಂಬವಿಲ್ಲ” ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮೋದಿ ಬೆಂಬಲಿಗರಿಂದ ‘ಮೋದಿ ಕಾ ಪರಿವಾರ್ ಅಭಿಯಾನ ನಡೆಸಲಾಗಿತ್ತು.