ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಮನವಿ ಮಾಡಿರುವ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಾಲಿನ ದರ ಏರಿಕೆ ಮಾಡುವಂತೆ ಕೆಎಂಎಫ್ ಮನವಿ ಮಾಡಿದೆ. ಅವರ ವಿನಂತಿ ನನ್ನ ಗಮನದಲ್ಲಿದೆ. ಈ ಬಗ್ಗೆ ಈ ತಕ್ಷಣಕ್ಕೆ ಯಾವುದೇ ಹೇಳಿಕೆ ನೀಡಲು ಆಗುವುದಿಲ್ಲ. ಮುಂದೆಯೂ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ ಎಂಧ ಹೇಳಿದ್ರು.
ರೈತರ ಆದಾಯ ದ್ವಿಗುಣಗೊಳ್ಳಬೇಕು ಎನ್ನುವುದು ಪ್ರಧಾನಿ ಮೋದಿಯವರ ಕನಸಾಗಿದೆ. ಹೈನುಗಾರಿಕೆಯನ್ನೂ ಗಮನದಲ್ಲಿಟ್ಟುಕೊಂಡು ಪ್ರಧಾನಿ ಈ ಮಾತನ್ನು ಹೇಳಿದ್ದಾರೆ. ಆದರೆ ಎಷ್ಟೋ ವರ್ಷಗಳಿಂದ ಅನ್ನದಾತ ಮಾತ್ರ ಎಲ್ಲಿದ್ದಾನೋ ಅಲ್ಲಿಯೇ ಇದ್ದಾನೆ. ದೇಶದಲ್ಲಿ ಕೃಷಿ ಕ್ಷೇತ್ರ ಅಭಿವೃದ್ಧಿ ಕಂಡಿದೆ. ಆದರೆ ರೈತ ಮಾತ್ರ ಅಭಿವೃದ್ಧಿಯಾಗಿಲ್ಲ ಎಂದು ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ರು.
ಕೆಎಂಎಫ್ ಅಭಿವೃದ್ಧಿಯಲ್ಲಿ ಯಡಿಯೂರಪ್ಪ ಪಾತ್ರವನ್ನು ಹಾಡಿಹೊಗಳಿದ ಸಿಎಂ ಬೊಮ್ಮಾಯಿ, ಕೆಎಂಎಫ್ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಹಾಲಿನ ಪುಡಿ ತಯಾರಿಕೆಗೆ ಪ್ರೋತ್ಸಾಹ ನೀಡಿದ್ದರು. ಅವರ ಹಾದಿಯಲ್ಲೇ ನಾನು ನಡೆಯುತ್ತೇನೆ. ಕೆಎಂಎಫ್ ದೇಶದಲ್ಲೇ ಮೊದಲ ಸ್ಥಾನಕ್ಕೆ ಏರಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದು ಬೊಮ್ಮಾಯಿ ಹೇಳಿದ್ರು.