ಐ ಲವ್ ಯೂ ಎಂಬ ಅರ್ಥವನ್ನು ಹೊಂದಿರುವ ಕವಿತೆ, ಟಿಪ್ಪಣಿ ಹೀಗೆ ಯಾವುದೇ ರೀತಿಯಲ್ಲಿ ಬರೆಯಲಾದ ಪ್ರೇಮ ಪತ್ರವನ್ನು ವಿವಾಹಿತೆಗೆ ನೀಡುವುದು ಅಪರಾಧ. ಈ ರೀತಿ ಮಾಡಿದರೆ ಅದು ದೌರ್ಜನ್ಯ ಪ್ರಕರಣ ವ್ಯಾಪ್ತಿಗೆ ಬರಲಿದೆ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಮಹತ್ವದ ಆದೇಶ ನೀಡಿದೆ.
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ 2011ರಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ. 45 ವರ್ಷದ ಮಹಿಳೆಯ ಜೊತೆ 54 ವರ್ಷದ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ ಪ್ರಕರಣದ ಅಡಿಯಲ್ಲಿ ಈ ತೀರ್ಪನ್ನು ನೀಡಲಾಗಿದೆ.
ಆರೋಪಿಯ ವಿರುದ್ಧ ಸೆಕ್ಷನ್ 354ರ ಅಡಿಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣವನ್ನು ದಾಖಲಿಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ಆರೋಪ ಸಾಬೀತಾದರೆ ಆರೋಪಿಗೆ ಗರಿಷ್ಟ 2 ವರ್ಷಗಳ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸಲಾಗುತ್ತದೆ.
2011ರಲ್ಲಿ ಅಕೋಲಾ ಜಿಲ್ಲೆಯಲ್ಲಿ 45 ವರ್ಷದ ಮಹಿಳೆ ತನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪ ಮಾಡಿದ್ದರು. ಸಂತ್ರಸ್ತೆ ಮದುವೆಯಾಗಿದ್ದು ಓರ್ವ ಪುತ್ರನನ್ನು ಹೊಂದಿದ್ದಾರೆ. ಆದರೂ ಆರೋಪಿ ಈಕೆಗೆ ಪ್ರೇಮ ಪತ್ರವನ್ನು ಬರೆದಿದ್ದ. ಇದನ್ನು ಸ್ವೀಕರಿಸಲು ವಿವಾಹಿತೆ ನಿರಾಕರಿಸಿದ್ದರು. ಆದರೆ ಆರೋಪಿ ವಿವಾಹಿತೆಯ ಮೇಲೆ ಪ್ರೇಮ ಪತ್ರ ಎಸೆದು ನಿನ್ನನ್ನು ನಾನು ಪ್ರೀತಿಸುತ್ತೇನೆ ಎಂದು ಹೇಳಿದ್ದ. ಅಲ್ಲದೇ ಈ ವಿಚಾರವನ್ನು ಎಲ್ಲೂ ಬಾಯ್ಬಿಡದಂತೆ ಬೆದರಿಕೆಯನ್ನೂ ಹಾಕಿದ್ದ. ಈ ಸಂಬಂಧ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ವಿವಾಹಿತೆಯ ಮೇಲೆ ಪ್ರೇಮ ಪತ್ರವನ್ನು ಎಸೆಯುವುದು ಹಾಗೂ ಕಿರುಕುಳ ನೀಡುವುದು ಅಪರಾಧ ಎಂದು ಹೇಳಿದೆ.
ಅಕೋಲಾ ಜಿಲ್ಲೆಯ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಮ್ಯಾಜಿಸ್ಟ್ರೇಟ್ ಆದೇಶವನ್ನು ಎತ್ತಿ ಹಿಡಿದ ಬಾಂಬೆ ಹೈಕೋರ್ಟ್, ಮಹಿಳೆಗೆ ಘನತೆ ಅನ್ನೋದು ಆಕೆ ಧರಿಸುವ ಶ್ರೇಷ್ಟವಾದ ಆಭರಣವಾಗಿದೆ. ಮಹಿಳೆಗೆ ಅವಮಾನಕ್ಕೊಳಗಾಗಿದ್ದಾಳೆ ಅಥವಾ ದೌರ್ಜನ್ಯಕ್ಕೊಳಗಾಗಿದ್ದಾಳೆಂದು ನಿರ್ಧರಿಸಲು ನಿಖರ ಮಾನದಂಡವಿಲ್ಲ. ಇದು ಪರಿಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ವಿವಾಹಿತೆಯ ಮೇಲೆ ಪ್ರೇಮ ಪತ್ರ ಎಸೆಯುವುದು ಹಾಗೂ ಅವಳಿಗೆ ಬೆದರಿಕೆ ಹಾಕುವುದು ಕೂಡ ಕಿರುಕುಳವೇ ಆಗಿದೆ ಎಂದು ಸ್ಪಷ್ಟನೆ ನೀಡಿದೆ.